ಹಾಸನ: ಟ್ರಕ್ ಟರ್ಮಿನಲ್ ವಿಷಯವಾಗಿ ಹೆಚ್ ಡಿ ರೇವಣ್ಣ ವಿರುದ್ಧ ಶಾಸಕ ಪ್ರೀತಮ್ ಗೌಡ ವಾಗ್ದಾಳಿ, ಗಂಭೀರ ಆರೋಪ
ಹಾಸನದಲ್ಲಿ ಪ್ರಸ್ತಾವಿತ ಟ್ರಕ್ ಟರ್ಮಿನಲ್ ನಿರ್ಮಾಣ ಯೋಜನೆಯನ್ನು ವಿರೋಧಿಸುತ್ತಿರುವ ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿರುದ್ಧ ಶಾಸಕ ಪ್ರೀತಮ್ ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Published: 30th April 2022 08:10 PM | Last Updated: 30th April 2022 08:10 PM | A+A A-

ಪ್ರೀತಮ್ ಗೌಡ
ಹಾಸನ: ಹಾಸನದಲ್ಲಿ ಪ್ರಸ್ತಾವಿತ ಟ್ರಕ್ ಟರ್ಮಿನಲ್ ನಿರ್ಮಾಣ ಯೋಜನೆಯನ್ನು ವಿರೋಧಿಸುತ್ತಿರುವ ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿರುದ್ಧ ಶಾಸಕ ಪ್ರೀತಮ್ ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75, ಸ್ನಾತಕೋತರ ಪದವಿ ಕೇಂದ್ರ ಹೇಮಗಂಗೋತ್ರಿ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣದ ಪ್ರಸ್ತಾವನೆ ಇದ್ದು ಇದಕ್ಕೆ ರೇವಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ರೇವಣ್ಣ ವಿರೋಧಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪ್ರೀತಮ್ ಗೌಡ, ಹಾಸನ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ತಾವು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಶ್ನಿಸಲು ರೇವಣ್ಣ ಯಾರು? ಎಂದು ಕೇಳಿದ್ದಾರೆ.
ಹಾಸನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಪ್ರೀತಮ್ ಗೌಡ, ರಾಜಕೀಯ ಕಾರಣಗಳಿಂದ ರೇವಣ್ಣ ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದ್ದು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ತೂರಾಟ ಮಾಡಬಾರದು ಎಂದು ಹೇಳಿದ್ದಾರೆ.
ರೇವಣ್ಣ ಅವರು ತಮ್ಮ ಕ್ಷೇತ್ರದಲ್ಲಿ ಹಾಗೂ ಹಾಸನ ನಗರದಲ್ಲಿ ನಡೆಸಿರುವ ಅಕ್ರಮಗಳ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ, ರೇವಣ್ಣ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 50 ಸಾವಿರ ಮತಗಳಿಂದ ಗೆಲ್ಲುವಂತೆ ಪ್ರೀತಮ್ ಗೌಡ ಇದೇ ವೇಳೆ ಸವಾಲು ಹಾಕಿದ್ದಾರೆ.
ಹೆಚ್ ಯು ಡಿಎ ಯಿಂದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೆಸರಿನಲ್ಲಿ ಮ್ಯೂಸಿಯಮ್ ನಿರ್ಮಾಣಕ್ಕಾಗಿ ನೀಡಿದ್ದ ಭೂಮಿಯಲ್ಲಿ ರೇವಣ್ಣ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿದ್ದು, ತಿಂಗಳಿಗೆ 50 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ರೇವಣ್ಣ ಇದೇ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿದ್ದರೆ, ರೇವಣ್ಣ ಮಾಡಿರುವ ಅಕ್ರಮ ಆಸ್ತಿಯ ದಾಖಲೆಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂದು ಪ್ರೀತಮ್ ಗೌಡ ಎಚ್ಚರಿಸಿದ್ದಾರೆ.