ರಾಜ್ಯಾದ್ಯಂತ ಮತ್ತೆ ವರುಣಾರ್ಭಟ: ಹಲವೆಡೆ ಅನಾಹುತ, ಪ್ರಾಣಹಾನಿ

ಕಳೆದ ಕೆಲ ದಿನಗಳಿಂದ ಕೊಂಚ ತಗ್ಗಿದ್ದ ಮಳೆರಾಯನ ಆರ್ಭಟ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಮತ್ತೆ ಶುರುವಾಗಿದೆ. ಕಳೆದೆರಡು ದಿನಗಳಿಂದ ಮತ್ತೆ ಸಾಕಷ್ಟು ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನದಿಗಳು ತುಂಬಿ ಹರಿಯುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ದ್ವೀಪ ರೀತಿಯಲ್ಲಿ ಆಗಿರುವ ದೃಶ್ಯ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ದ್ವೀಪ ರೀತಿಯಲ್ಲಿ ಆಗಿರುವ ದೃಶ್ಯ

ಬೆಂಗಳೂರು: ಕಳೆದ ಕೆಲ ದಿನಗಳಿಂದ ಕೊಂಚ ತಗ್ಗಿದ್ದ ಮಳೆರಾಯನ ಆರ್ಭಟ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಮತ್ತೆ ಶುರುವಾಗಿದೆ. ಕಳೆದೆರಡು ದಿನಗಳಿಂದ ಮತ್ತೆ ಸಾಕಷ್ಟು ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನದಿಗಳು ತುಂಬಿ ಹರಿಯುತ್ತಿವೆ.

ಇಂದಿನಿಂದ ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಮಳೆಯ ಅಬ್ಬರ ಕೊಂಚ ಏರಿಕೆಯಾಗಲಿದ್ದು, ಸಂಜೆಯ ಹೊತ್ತಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಕಡೆ ಧಾರಾಕಾರ ಮಳೆಯಾಗುತ್ತಿದೆ. 

ಸಿಲಿಕಾನ್ ಸಿಟಿಯಲ್ಲಿ ಸಂಜೆ ಆಗುತ್ತಿದ್ದಂತೆ ವರುಣನ ಅಬ್ಬರ ಶುರುವಾಗುತ್ತಿದೆ. ಗುಡುಗು ಸಹಿತ ಮಳೆಯಿಂದ ರಾಜಧಾನಿಯಲ್ಲಿ ಮರಗಳು, ರಂಬೆ ಕೊಂಬೆಗಳು ಧರೆಗೆ ಉರುಳಿತ್ತಿವೆ. 

ಧಾರವಾಡ, ಗದಗ, ಬಳ್ಳಾರಿ, ಮಂಡ್ಯ, ರಾಮನಗರ, ಯಾದಗಿರಿಗಳಲ್ಲಿ ಇಂದಿನಿಂದ ಆಗಸ್ಟ್ 4ರವೆರೆಗೆ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಬಾಗಲಕೋಟೆ, ವಿಜಯಪುರ ಮತ್ತು ಕಲಬುರಗಿಯಲ್ಲಿ ಆಗಸ್ಟ್ 4ರಂದು ಯೆಲ್ಲೋ ಅಲರ್ಟ್ ನ್ನು ರಾಜ್ಯ ಹವಾಮಾನ ಇಲಾಖೆ ಘೋಷಣೆ ಮಾಡಿದೆ. 

ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಸಂಪಾಜೆ ಕಲ್ಲುಗುಂಡಿಯಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ ಕಾರ್ ಗಳು ನೀರಿನಲ್ಲಿ ತೇಲಿವೆ. ಸಂಪಾಜೆ, ಕಲ್ಲುಗುಂಡಿ ಪರಿಸರದಲ್ಲಿ ಅಧಿಕ ಮಳೆಯಾಗುತ್ತಿದ್ದು. ಅಪಾಯದಲ್ಲಿದ್ದ 15 ಮನೆಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ. ಕೊಡಗಿನ ಜೋಡುಪಾಲದಂತೆ ಅರೆಕಲ್ ಬೆಟ್ಟದಲ್ಲಿ ಭೂಕುಸಿತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಲ್ಲಿ ಕಳೆದ ರಾತ್ರಿ ಭೂಕುಸಿತದಿಂದ ಮನೆ ಕುಸಿದು ಬಿದ್ದಿದ್ದು, ಅವಶೇಷಗಳಡಿ ಸಿಲುಕಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಭಾರೀ ಮಳೆಯಿಂದಾಗಿ ದರ್ಪಣತೀರ್ಥ ನದಿಯು ತುಂಬಿ ಹರಿಯುತ್ತಿದ್ದು, ಆದಿಸುಬ್ರಹ್ಮಣ್ಯ ದೇವಸ್ಥಾನದ ಒಳಗೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ಇಂದು ನಾಗರಪಂಚಮಿಯಾದರೂ ಇಂದು ಮತ್ತು ನಾಳೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪ್ರವೇಶಕ್ಕೆ ಎರಡು ದಿನ ನಿರ್ಬಂಧ ವಿಧಿಸಲಾಗಿದ್ದು, ಭಕ್ತರು ಸಹಕರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆವಿ ಅವರು ಹೇಳಿದ್ದಾರೆ. ಸುಳ್ಯ ತಾಲ್ಲೂಕಿನ ಎರಡು ತಾಲ್ಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

20 ಜಿಲ್ಲೆಗಳಿಗೆ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ ರಾಜ್ಯದ 20 ಜಿಲ್ಲೆಗಳಿಗೆ ಅಲರ್ಟ್ (Rain Alert) ಘೋಷಣೆ ಮಾಡಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ಅಧಿಕಾರಿಗಳಿಗೆ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. 

ಬೆಂಗಳೂರಿನ ಸಾಯಿ ಲೇಔಟ್ ಮತ್ತೊಮ್ಮೆ ಜಲಾವೃತಗೊಂಡಿದೆ. ಎರಡು ತಿಂಗಳ ಹಿಂದೆಯೂ ಸಾಯಿ ಲೇಔಟ್ ಜಲಾವೃತಗೊಂಡಿತ್ತು. ರಾತ್ರಿ ಸುರಿದ ಮಳೆಯಿಂದ ಸಾಯಿ ಲೇಔಟ್ ಒಳಗೆ ನೀರು ನುಗ್ಗಿದ್ದು, ಬಹುತೇಕ ನೆಲಮಹಡಿಗಳು ಜಲಾವೃತಗೊಂಡಿವೆ. 

ಐವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ವಸ್ತುಗಳೆಲ್ಲಾ ನೀರು ಪಾಲಾಗಿವೆ. ಎರಡು ತಿಂಗಳ ಹಿಂದೆ ಸಿಎಂ ಬೊಮ್ಮಾಯಿ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ಸಮಸ್ಯೆ ಹಾಗೆಯೇ ಉಳಿದಿದೆ.

ಮನೆ ಮೇಲೆ ಗುಡ್ಡ ಕುಸಿದು ನಾಲ್ವರ ಸಾವು: ಭಟ್ಕಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಮನೆಯ ಮೇಲೆ ಗುಡ್ಡ ಕುಸಿದು ನಾಲ್ವರು ಮೃತಪಟ್ಟಿದ್ದಾರೆ. ನಾರಾಯಣ್ ನಾಯ್ಕ್ (60),‌ ಮಗಳು ಲಕ್ಷ್ಮೀ ನಾರಾಯಣ್ ನಾಯ್ಕ್ (45), ಮಗ ಅನಂತ್ ನಾರಾಯಣ್ ನಾಯ್ಕ್ (38), ಹಾಡುವಳ್ಲಿ ಬಡಬಾಗಿಲಿನ ತಂಗಿ ಮಗ ಪ್ರವೀಣ್ ರಾಮಕೃಷ್ಣ ನಾಯ್ಕ್ (16) ಮೃತಪಟ್ಟಿದ್ದಾರೆ. ಇಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com