ಮಹಡಿಯಿಂದ ಮಗುವನ್ನು ಕೆಳಗೆ ಎಸೆದು ಕೈಯಾರೆ ಕೊಂದ ತಾಯಿ: ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ

ಲೋಕದಲ್ಲಿ ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಿ ಇರಲಾರಳು ಎಂಬುದು ರೂಢಿಯಲ್ಲಿರುವ ಮಾತು. ಆದರೆ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಇದಕ್ಕೆ ಅಪವಾದವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲೋಕದಲ್ಲಿ ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಿ ಇರಲಾರಳು ಎಂಬುದು ರೂಢಿಯಲ್ಲಿರುವ ಮಾತು. ಆದರೆ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಇದಕ್ಕೆ ಅಪವಾದವಾಗಿದೆ.

ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿ ಸುಷ್ಮಾ ಭಾರದ್ವಾಜ್ ಳಿಗೆ ಆ ಕ್ಷಣದಲ್ಲಿ ಏನನ್ನಿಸಿತೋ ಏನೋ ತಾನೇ ಹೆತ್ತ 5 ವರ್ಷದ ಮಗುವನ್ನು 4ನೇ ಮಹಡಿ ಮೇಲಿನಿಂದ ಕೆಳಗೆ ತಳ್ಳಿದ್ದಾಳೆ. ಮಗು ಕೆಳಗೆ ಬಿದ್ದ ರಭಸಕ್ಕೆ ಸ್ಥಳದಲ್ಲಿಯೇ ಬಹುತೇಕ ಪ್ರಾಣಪಕ್ಷಿ ಹಾರಿಹೋಗಿದೆ. 

ಮಗುವನ್ನು ಎಸೆದ ನಂತರ ತಾಯಿ ಸುಷ್ಮಾ ಚೀರಿಕೊಂಡಿದ್ದಾಳೆ. ಕೊನೆಗೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಆ ಹೊತ್ತಿಗೆ ಅಕ್ಕಪಕ್ಕದಲ್ಲಿದ್ದವರು ನೋಡಿ ಈಕೆಯನ್ನು ಕಾಪಾಡಿದ್ದಾರೆ.

ಮಗು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿತ್ತು. 5 ವರ್ಷವಾದರೂ ಮಾತು ಬರುತ್ತಿರಲಿಲ್ಲ ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ತಾಯಿ ಸುಷ್ಮಾ ನೊಂದು ಈ ಕೃತ್ಯವೆಸಗಿದ್ದಾಳೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಸುಷ್ಮಾ ದಂತ ವೈದ್ಯೆಯಾಗಿ ತರಬೇತಿ ಪಡೆಯುತ್ತಿದ್ದು, ತನ್ನ ವೃತ್ತಿಜೀವನ ಮಗುವಿನಿಂದಾಗಿ ಹಾಳಾಗುತ್ತಿದೆ ಎಂದು ಭಾವಿಸಿ ಸಿಟ್ಟಿನಲ್ಲಿ ಈ ಕೃತ್ಯವೆಸಗಿರಬಹುದು ಎಂದು ಹೇಳಲಾಗುತ್ತಿದೆ. ಆಕೆ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ. ಈಕೆಯ ಪತಿ ಕಿರಣ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾರೆ. 

ಮೂರು ತಿಂಗಳ ಹಿಂದೆ ಮಗುವನ್ನು ರೈಲ್ವೇ ನಿಲ್ದಾಣದಲ್ಲಿ ಸುಷ್ಮಾ ಬಿಟ್ಟು ಬಂದಿದ್ದಳಂತೆ. ಪೊಲೀಸರು ಮಗುವಿನ ಜೊತೆ ತಂದೆ-ತಾಯಿ ಹುಡುಕಿಕೊಂಡು ಮನೆಗೆ ಬಂದು ಬಿಟ್ಟುಹೋಗಿದ್ದರು.

ಬೆಂಗಳೂರಿನ ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ಸುಷ್ಮಾ ಭಾರದ್ವಾಜ್ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com