
ಕೊಡಗಿನಲ್ಲಿ ಭಾರಿ ಮಳೆ
ಮಡಿಕೇರಿ: ಕೊಡಗಿನಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಸೋಮವಾರದವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಭೂಕುಸಿತದಿಂದ ಜಿಲ್ಲೆಯ ಹಲವಾರು ರಸ್ತೆಗಳು ಹಾನಿಗೊಳಗಾಗಿದ್ದು, ನಿವಾಸಿಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಮಡಿಕೇರಿ ತಾಲೂಕಿನ ಹೊಡವಾಡ-ನಾಪೋಕ್ಲು ರಸ್ತೆಯ ಭಾಗವು ಒಂದು ಅಡಿಗೂ ಹೆಚ್ಚು ಕುಸಿದು ತೀವ್ರ ಹಾನಿಯಾಗಿದೆ. ಈ ರಸ್ತೆಯಲ್ಲಿ ತಾತ್ಕಾಲಿಕವಾಗಿ ಸ್ಲಿಪ್ ಭದ್ರಪಡಿಸಲಾಗಿದ್ದರೂ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಘಟನಾ ಸ್ಥಳಕ್ಕೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಭಾನುವಾರ ಭೇಟಿ ನೀಡಿದ್ದರು.
ಇದನ್ನೂ ಓದಿ: ಮುಂಗಾರು ಆರಂಭದಿಂದ ಈವರೆಗೂ ಮಳೆಯಿಂದ 74 ಮಂದಿ ಸಾವು: ರಾಜ್ಯಾದ್ಯಂತ ಸಿಎಂ ಬೊಮ್ಮಾಯಿ ತೀವ್ರ ನಿಗಾ
ಕರಿಕೆ-ಕೇರಳ ಅಂತರರಾಜ್ಯ ರಸ್ತೆಯು 15 ಸ್ಥಳಗಳಲ್ಲಿ ಭೂಕುಸಿತವನ್ನು ವರದಿ ಮಾಡಿದೆ, ತಾಜಾ ಭೂಕುಸಿತಗಳು ವರದಿಯಾಗುತ್ತಿವೆ ಮತ್ತು ಪರಿಹಾರ ಕಾರ್ಯದ ಮೇಲೆ ಪರಿಣಾಮ ಬೀರಿವೆ. ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಉಕ್ಕಿ ಹರಿಯುತ್ತಿರುವ ಕಾವೇರಿಯಿಂದ ಭಾಗಮಂಡಲ ಪಟ್ಟಣ ಜಲಾವೃತವಾಗಿದ್ದು, ನಿವಾಸಿಗಳನ್ನು ಸ್ಥಳಾಂತರಿಸಲು ಆಡಳಿತವು ತೆಪ್ಪದ ದೋಣಿಗಳ ವ್ಯವಸ್ಥೆಯನ್ನು ಮಾಡಿದೆ. ಥೋರಾ ಗ್ರಾಮ ಮತ್ತು 2ನೇ ಮೊಣ್ಣಂಗೇರಿ ಗ್ರಾಮಗಳು ದುರ್ಬಲ ಎಂದು ಗುರುತಿಸಲಾಗಿರುವುದರಿಂದ ನಿವಾಸಿಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: ನಿರಂತರ ಮಳೆ: ಕೊಡಗು ಸಮೀಪದ ಚೆಂಬು ಗ್ರಾಮದಲ್ಲಿ ರಸ್ತೆಗಳು, ಸೇತುವೆಗಳಿಗೆ ಹಾನಿ, ಸಂಪರ್ಕ ಕಳೆದುಕೊಂಡ ಗ್ರಾಮ
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 80.4 ಮಿ.ಮೀ ಮಳೆಯಾಗಿದ್ದು, ಭಾಗಮಂಡಲ 162.2 ಮಿ.ಮೀ ಮತ್ತು ಸೋಮವಾರಪೇಟೆಯ ಶಾಂತಳ್ಳಿಯಲ್ಲಿ 192 ಮಿ.ಮೀ ಮಳೆ ದಾಖಲಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 115.22 ಮಿ.ಮೀ ಮಳೆಯಾಗಿದ್ದರೆ, ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ ಕ್ರಮವಾಗಿ 75.1 ಮಿ.ಮೀ ಮತ್ತು 50.88 ಮಿ.ಮೀ ಮಳೆ ದಾಖಲಾಗಿದೆ.