ಭಾರತದ ಅತಿ ಎತ್ತರದ ಧ್ವಜಸ್ತಂಭ ಹೊಸಪೇಟೆಯಲ್ಲಿ ಅನಾವರಣ

ಹೊಸ ಜಿಲ್ಲೆ ವಿಜಯನಗರದ ಕೇಂದ್ರ ಸ್ಥಾನವಾದ ಹೊಸಪೇಟೆಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಅತಿ ಎತ್ತರದ ಧ್ವಜಸ್ತಂಭವನ್ನು ಅನಾವರಣಗೊಳಿಸಿ ರಾಷ್ಟ್ರಧ್ವಜವನ್ನು ಹಾರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಹೊಸಪೇಟೆ: ಹೊಸ ಜಿಲ್ಲೆ ವಿಜಯನಗರದ ಕೇಂದ್ರ ಸ್ಥಾನವಾದ ಹೊಸಪೇಟೆಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಅತಿ ಎತ್ತರದ ಧ್ವಜಸ್ತಂಭವನ್ನು ಅನಾವರಣಗೊಳಿಸಿ ರಾಷ್ಟ್ರಧ್ವಜವನ್ನು ಹಾರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಸದ್ಯ ಧ್ವಜಸ್ತಂಭದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅಂತಿಮವಾಗಿ ಸಿದ್ಧಗೊಂಡಾಗ ಅದು 123 ಮೀಟರ್‌ ಎತ್ತರವಾಗಲಿದೆ. ದೇಶದ ಎರಡನೇ ಅತಿ ಎತ್ತರದ ಧ್ವಜಸ್ತಂಭ ಕೂಡ ರಾಜ್ಯದಲ್ಲಿದ್ದು, ಅದು ಬೆಳಗಾವಿಯ ಕೋಟೆ ಕೆರೆಯಲ್ಲಿ 110 ಮೀಟರ್ ಎತ್ತರವನ್ನು ಹೊಂದಿದೆ.

<strong>123 ಮೀಟರ್‌ ಎತ್ತರದ ಧ್ವಜ ಸ್ತಂಭ ಸ್ಥಾಪನೆಗೆ ಸಿದ್ಧತೆ</strong>
123 ಮೀಟರ್‌ ಎತ್ತರದ ಧ್ವಜ ಸ್ತಂಭ ಸ್ಥಾಪನೆಗೆ ಸಿದ್ಧತೆ

ಹೊಸಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ಧ್ವಜಸ್ತಂಭ ಯೋಜನೆಯು ಸ್ಥಳೀಯ ಶಾಸಕ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಕಲ್ಪನೆಯ ಕೂಸು.

ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಈ ಯೋಜನೆಗೆ 6 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದ್ದು, ಪುನೀತ್ ರಾಜ್‌ಕುಮಾರ್ ಕ್ರೀಡಾಂಗಣದಲ್ಲಿ ಈ ಧ್ವಜಸ್ತಂಭವನ್ನು ಅಳವಡಿಸುವ ಕಾರ್ಯವನ್ನು ಖಾಸಗಿ ಪ್ರಾಯೋಜಕರು ಕೈಗೊಂಡಿದ್ದಾರೆ. ಮಹಾರಾಷ್ಟ್ರ ಮೂಲದ ಕಂಪನಿಯೊಂದು ಧ್ವಜಸ್ತಂಭವನ್ನು ಸ್ಥಾಪಿಸುವ ಕೆಲಸ ಮಾಡುತ್ತಿದ್ದು, ಅದರ ಮೇಲೆ 120x80 ಅಡಿ ಆಯಾಮದ ತ್ರಿವರ್ಣ ಧ್ವಜವನ್ನು ಹಾರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

'ಹಂಪಿ ಮತ್ತು ತುಂಗಭದ್ರಾ ಜಲಾಶಯವನ್ನು ಹೊರತುಪಡಿಸಿ ಈ ಹೊಸ ಧ್ವಜಸ್ತಂಭವು ಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಜಿಲ್ಲೆಯು ಈಗಾಗಲೇ ಪ್ರಪಂಚದಾದ್ಯಂತ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹೊಸಪೇಟೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲಿಯಾದರೂ ನಿಂತು ನೋಡಿದರೂ ಈ ಧ್ವಜಸ್ತಂಭ ಕಾಣಿಸುತ್ತದೆ’ ಎಂದು ಧ್ವಜಸ್ತಂಭ ನಿರ್ಮಾಣ ಸಮಿತಿ ಸದಸ್ಯರೊಬ್ಬರು ತಿಳಿಸಿದರು.

ಆಗಸ್ಟ್ 15 ರಂದು ಆನಂದ್ ಸಿಂಗ್ ಅವರು ಈ ಧ್ವಜಸ್ತಂಭವನ್ನು ಅನಾವರಣ ಮಾಡಬೇಕೆಂದು ಸ್ಥಳಿಯ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ. ಆದರೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಆನಂದ್ ಸಿಂಗ್ ಅವರು ಕೊಪ್ಪಳದ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನಡೆಸಬೇಕಿದೆ ಎನ್ನಲಾಗಿದೆ.

ಹೀಗಾಗಿ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆಯಾಗಿರುವ ಶಶಿಕಲಾ ಜೊಲ್ಲೆ ಅವರು ಹೊಸಪೇಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಯೋಜನೆಯ ಕಲ್ಪನೆಯಲ್ಲಿ ಸಿಂಗ್ ಪ್ರಮುಖ ಪಾತ್ರ ವಹಿಸಿರುವುದರಿಂದ ಅವರಿಗೆ ಅನಾವರಣ ಮಾಡಲು ಅವಕಾಶ ನೀಡಬೇಕೆ ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com