ರೈತ ಮುಖಂಡ ರಾಕೇಶ್ ಟಿಕಾಯತ್‌ಗೆ ಮಸಿ: ನ್ಯಾಯಾಲಯಕ್ಕೆ ಪೊಲೀಸರಿಂದ ದೋಷಾರೋಪ ಪಟ್ಟಿ ಸಲ್ಲಿಕೆ
ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಮೇಲೆ ನಗರದಲ್ಲಿ ನಡೆದಿದ್ದ ಸಭೆಯಲ್ಲಿ ಮಸಿ ಬಳಿದು ಹಲ್ಲೆ ನಡೆಸಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಹೈಗ್ರೌಂಡ್ಸ್ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
Published: 11th August 2022 10:27 AM | Last Updated: 11th August 2022 01:43 PM | A+A A-

ರಾಕೇಶ್ ಟಿಕಾಯತ್
ಬೆಂಗಳೂರು: ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಮೇಲೆ ನಗರದಲ್ಲಿ ನಡೆದಿದ್ದ ಸಭೆಯಲ್ಲಿ ಮಸಿ ಬಳಿದು ಹಲ್ಲೆ ನಡೆಸಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಹೈಗ್ರೌಂಡ್ಸ್ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಮೇ 30ರಂದು ಈ ಘಟನೆ ನಡೆದಿತ್ತು. ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಆಗಿನ ಕೆಆರ್‌ಆರ್‌ಎಸ್ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಕೈವಾಡವಿದ್ದು ಈ ಸಂಬಂಧ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಕೇಶ್ ಟಿಕಾಯತ್ ಮತ್ತು ಮತ್ತೊಬ್ಬ ರೈತ ಮುಖಂಡ ಯುಧ್‌ವೀರ್ ಸಿಂಗ್ ಕೋರಿದ್ದರು.
ಭರತ್ ಶೆಟ್ಟಿ, ಪ್ರದೀಪ್, ಶಿವಕುಮಾರ್, ಉಮಾದೇವಿ ಸೇರಿದಂತೆ ಬಂಧಿತರ ವಿವರವೂ ಆರೋಪಪಟ್ಟಿಯಲ್ಲಿದೆ. ರಾಷ್ಟ್ರೀಯ ಮಟ್ಟದ ನಾಯಕರ ಗಮನ ಸೆಳೆಯುವುದೇ ದಾಳಿಯ ಹಿಂದಿನ ಪ್ರಮುಖ ಕಾರಣ ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆರೋಪಿಗಳು ತಮ್ಮ ಹೆಸರು ರಾತ್ರೋರಾತ್ರಿ ಮುಂಚೂಣಿಗೆ ಬರಬೇಕು. ರಾಜ್ಯದಲ್ಲಿ ಹೆಸರು ಮಾಡಬೇಕೆಂಬ ದುರುದ್ದೇಶದಿಂದ ಟಿಕಾಯತ್‌ಗೆ ಮಸಿ ಬಳಿದಿದ್ದರು’ ಎಂಬ ಅಂಶವನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ರಾಕೇಶ್ ಟಿಕಾಯತ್ ಮೇಲೆ ಮಸಿ ದಾಳಿ ಪ್ರಕರಣ: ಮಹಿಳೆ ಬಂಧನ
ಆಡಿಯೊ ಸಾಕ್ಷ್ಯ, 89 ಮಂದಿಯ ಹೇಳಿಕೆ ಸೇರಿ 450 ಪುಟಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದಾರೆ. ನಗರದಲ್ಲಿ ಸಭೆ ನಡೆಯುವ ಮಾಹಿತಿ ತಿಳಿದಿದ್ದ ಆರೋಪಿಗಳು ಒಂದು ವಾರಕ್ಕೂ ಮೊದಲು ತಂತ್ರ ರೂಪಿಸಿದ್ದರು. ಟಿಕಾಯತ್ ಮೇಲೆ ಕೊಳೆತ ಟೊಮೆಟೊ ಹಾಗೂ ಮೊಟ್ಟೆ ಎಸೆಯುವ ಯೋಜನೆ ರೂಪಿಸಿಕೊಂಡಿದ್ದರು. ಅದು ಸಾಧ್ಯವಾಗದಿದ್ದರೆ ಮಸಿ ಬಳಿಯಲು ನಾಲ್ವರು ಒಂದೆಡೆ ಚರ್ಚಿಸಿ ಯೋಜನೆ ರೂಪಿಸಿಕೊಂಡು ಸಭೆಗೆ ಬಂದಿದ್ದರು ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.