'ಅರುಂಧತಿ' ಸಿನಿಮಾ ನೋಡಿ ಮೋಕ್ಷಕ್ಕಾಗಿ ಬೆಂಕಿ ಹಚ್ಚಿಕೊಂಡ ಯುವಕ ಸಾವು

ತೆಲುಗಿನ ಹಾರರ್ ಫ್ಯಾಂಟಸಿ ಸಿನಿಮಾ ‘ಅರುಂಧತಿ’ ನೋಡಿ ಮೋಕ್ಷಕ್ಕಾಗಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಯುವಕನೋರ್ವ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತುಮಕೂರು: ತೆಲುಗಿನ ಹಾರರ್ ಫ್ಯಾಂಟಸಿ ಸಿನಿಮಾ ‘ಅರುಂಧತಿ’ ನೋಡಿ ಮೋಕ್ಷಕ್ಕಾಗಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಯುವಕನೋರ್ವ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ಮಧುಗಿರಿ ತಾಲೂಕಿನ ಗಿಡ್ಡನಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ತೆಲುಗಿನ ಅರುಂಧತಿ ಸಿನಿಮಾದ ಗೀಳು ಅಂಟಿಸಿಕೊಂಡ ಯುವಕ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾನೆ. ಗಿಡ್ಡನಪಾಳ್ಯದ ರೇಣುಕಯ್ಯ ಬೆಂಕಿ ಹಚ್ಚಿಕೊಂಡ ಯುವಕ. ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದ ಈತನನ್ನು ತುಮಕೂರಿನ ಕಾಲೇಜಿಗೆ ಸೇರಿಸಲಾಗಿತ್ತು. 

ನಂತರ ಹಾಸ್ಟೆಲ್ ವಿದ್ಯಾರ್ಥಿಗಳೊಂದಿಗೆ ಸಿನಿಮಾ ಗೀಳು ಅಂಟಿಸಿಕೊಂಡಿದ್ದ ಎನ್ನಲಾಗಿದೆ. ಮೊದಲ ವರ್ಷದ ಪಿಯುಸಿ ತೇರ್ಗಡೆಯಾದ ನಂತರ ಸಿನಿಮಾ ನೋಡುವ ಚಟದಿಂದ ಶಾಲೆ ಬಿಟ್ಟಿದ್ದ. ಅರುಂಧತಿ’ ಚಿತ್ರವನ್ನು ಅನೇಕ ಬಾರಿ ವೀಕ್ಷಿಸಿದ್ದ, ಅದರಲ್ಲಿ ನಾಯಕಿ ಅವಳ ಇಚ್ಛೆಯಿಂದ ಸಾಯುತ್ತಾಳೆ ಮತ್ತು ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಲು ಮರುಹುಟ್ಟು ಪಡೆಯುತ್ತಾಳೆ. ಇದೇ ದೃಶ್ಯದಿಂದ ಪ್ರಭಾವಿತನಾಗಿ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ತೆಲುಗಿನಲ್ಲಿ ತೆರೆಕಂಡಿದ್ದ ಅರುಂಧತಿ ಸಿನಿಮಾದಿಂದ ಪ್ರಭಾವಿತಗೊಂಡಿದ್ದ ಈತ ಪದೇ ಪದೇ ಈ ಸಿನಿಮಾ ವೀಕ್ಷಣೆ ಮಾಡುತ್ತಿದ್ದ ಎನ್ನಲಾಗಿದ್ದು, ವಿದ್ಯಾಭ್ಯಾಸ ಬಿಟ್ಟು ಮನೆಗೂ ಬರದೆ ತುಮಕೂರಿನಲ್ಲಿ ಉಳಿದುಕೊಂಡಿದ್ದ. ಕಳೆದ ಭಾನುವಾರ ಊರಿಗೆ ಬಂದಿದ್ದಾಗಲೂ ತಂದೆ-ತಾಯಿ ಈತನಿಗೆ ಬುದ್ಧಿವಾದ ಹೇಳಿದರೂ ಸಹ ಅರುಂಧತಿ ನೋಡುವುದನ್ನು ಬಿಟ್ಟಿರಲಿಲ್ಲ. ಆ ಚಿತ್ರದ ಕೊನೆಯಲ್ಲಿ ಬೆಂಕಿಗೆ ಆಹುತಿಯಾಗುವುದನ್ನು ಪದೇ ಪದೇ ನೋಡಿ ಅದೇ ರೀತಿ ಬೆಂಕಿ ಹಚ್ಚಿಕೊಳ್ಳಲು 20 ಲೀಟರ್ ಪೆಟ್ರೋಲ್ ಖರೀದಿಸಿದ್ದ.

ಒಂದು ಜೊತೆ ಬಟ್ಟೆಯನ್ನು ಪ್ರತ್ಯೇಕವಾಗಿ ತಂದು, ನಿನ್ನೆ ಸಂಜೆ ರೇಷ್ಮೆ ಇಲಾಖೆ ನರ್ಸರಿ ಬಳಿಯ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಶಾಖ ತಡೆಯಲಾಗದೆ ರಸ್ತೆ ಕಡೆಗೆ ಓಡಿ ಬಂದು ಮುಕ್ತಿ ಕೊಡುವಂತೆ ಗೋಳಾಡಿದ್ದಾನೆ. ರಸ್ತೆಯಲ್ಲಿ ಹೋಗುತ್ತಿದ್ದವರು ಈತನ ಚೀರಾಟ ಗಮನಿಸಿ ರಕ್ಷಿಸಿ, ಆಂಬುಲೆನ್ಸ್ ಮೂಲಕ ಮಧುಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ರವಾನಿಸಲಾಗಿದೆ. ಶೇ.60ರಷ್ಟು ಸುಟ್ಟಗಾಯಗಳಾಗಿದ್ದ ಆತ ಗುರುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಕೊಡಿಗೇನಹಳ್ಳಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಯುವಕ ಸುಮಾರು 20 ಬಾರಿ ಆ ಚಿತ್ರವನ್ನು ವೀಕ್ಷಿಸಿರಬಹುದು ಎಂದು ಪೋಷಕರು ಹೇಳಿದ್ದಾರೆ.  ಅವನು ಚೆನ್ನಾಗಿ ಓದಬೇಕು ಮತ್ತು ಉತ್ತಮ ವೃತ್ತಿಜೀವನವನ್ನು ಹೊಂದಬೇಕೆಂದು ನಾವು ಬಯಸಿದ್ದೇವೆ. ದುರದೃಷ್ಟವಶಾತ್, ಚಲನಚಿತ್ರಗಳ ಚಟ ಅವರ ಜೀವನವನ್ನು ಬಲಿತೆಗೆದುಕೊಂಡಿತು ಎಂದು ಉಪನ್ಯಾಸಕರೂ ಆಗಿರುವ ನಿಕಟ ಸಂಬಂಧಿ ರಾಜು ವಿಷಾದಿಸಿದ್ದಾರೆ.

ಸಂತ್ರಸ್ತನ ತಂದೆ ಸಿದ್ದಪ್ಪ ತನ್ನನ್ನು ತಾನು ಬೆಂಕಿ ಹಚ್ಚಿಕೊಂಡ ಕೂಡಲೇ "ಮೋಕ್ಷ" ಕೊಡುವಂತೆ ಕೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com