ಪರೇಶ್‌ ಮೇಸ್ತ ಕೊಲೆ ಆರೋಪಿಗೆ ವಕ್ಫ್ ಮಂಡಳಿ ಹುದ್ದೆ; ತೀವ್ರ ವಿರೋಧ, ವ್ಯಾಪಕ ಮುಜುಗರದ ಬಳಿಕ ತಡೆ ನೀಡಿದ ಸರ್ಕಾರ

ಪರೇಶ್‌ ಮೇಸ್ತ ಸಾವಿನ ಪ್ರಕರಣದ ಪ್ರಮುಖ ಆರೋಪಿ ಜಮಾಲ್‌ ಆಜಾದ್‌ ಅಣ್ಣಿಗೇರಿಗೆ ಉತ್ತರ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್‌ ಸಲಹಾ ಸಮಿತಿಯ ಉಪಾಧ್ಯಕ್ಷ ಸ್ಥಾನ ನೀಡಿ ಹೊರಡಿಸಿದ್ದ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆ ಕೇಳಿ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಆದೇಶವನ್ನು ತಡೆ ಹಿಡಿದಿದೆ.
ವಕ್ಫ್ ಮಂಡಳಿ ನೇಮಕಾತಿ ರದ್ದು
ವಕ್ಫ್ ಮಂಡಳಿ ನೇಮಕಾತಿ ರದ್ದು

ಬೆಂಗಳೂರು: ಪರೇಶ್‌ ಮೇಸ್ತ ಸಾವಿನ ಪ್ರಕರಣದ ಪ್ರಮುಖ ಆರೋಪಿ ಜಮಾಲ್‌ ಆಜಾದ್‌ ಅಣ್ಣಿಗೇರಿಗೆ ಉತ್ತರ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್‌ ಸಲಹಾ ಸಮಿತಿಯ ಉಪಾಧ್ಯಕ್ಷ ಸ್ಥಾನ ನೀಡಿ ಹೊರಡಿಸಿದ್ದ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆ ಕೇಳಿ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಆದೇಶವನ್ನು ತಡೆ ಹಿಡಿದಿದೆ.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಇದೇ ಆಗಸ್ಟ್‌ 1ರಂದು ಮಾಡಿದ್ದ ಆದೇಶದಲ್ಲಿ ಅಣ್ಣಿಗೇರಿಗೆ ಉತ್ತರ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್‌ ಸಲಹಾ ಸಮಿತಿ ಉಪಾಧ್ಯಕ್ಷ ಸ್ಥಾನ ನೀಡಿತ್ತು. ರಾಜ್ಯ ಸರ್ಕಾರವು ತನ್ನ ಆಗಸ್ಟ್ 1, 2022 ರ ಆದೇಶದಲ್ಲಿ (KSBV/ADM/CR/45/2010-11) ಮೂರು ವರ್ಷಗಳ ಅವಧಿಗೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಒಬ್ಬ ಅಧ್ಯಕ್ಷರು, ಆರು ಉಪಾಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿತ್ತು. ಸರ್ಕಾರದ ಈ ನಿರ್ಧಾರ ಅನಂತರ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅಲ್ಲದೆ, ಬಿಜೆಪಿ ಸರ್ಕಾರದ ವಿರುದ್ಧ ಪಕ್ಷದ ಮುಖಂಡರೇ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದರು. ಈ ಕುರಿತು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಪರೇಶ್ ಮೇಸ್ತ ಕೊಲೆ ಆರೋಪಿಯನ್ನು ವಕ್ಫ್ ಬೋರ್ಡ್ ಉಪಾಧ್ಯಕ್ಷನನ್ನಾಗಿ ಮಾಡ ಹೊರಟಿರುವುದು ಅಕ್ಷಮ್ಯ ಎಂದು ಕಿಡಿಕಾರಿದ್ದರು. 

'ಈ ಕುರಿತಾಗಿ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ಚುನಾವಣೆಗಳು ಹತ್ತಿರ ಬಂದಾಗಲೆಲ್ಲ ಇದ್ದಕ್ಕಿದ್ದಂತೆ ಅಮಾಯಕರ ಕೊಲೆಗಳು ನಡೆಯುತ್ತವೆ. ಬಿಜೆಪಿ ಸರ್ಕಾರಗಳು ಬಿಕ್ಕಟ್ಟಿಗೆ ಸಿಲುಕಿಕೊಂಡಾಗಲೆಲ್ಲ ಅಹಿತಕರ ಘಟನೆಗಳು ನಡೆಯುತ್ತವೆ. ಸಂಘ ಪರಿವಾರದ ಮಾಜಿ ಮುಖಂಡರಾಗಿದ್ದ ಮಹೇಂದ್ರ ಕುಮಾರ್ ಅವರು ಬಿಜೆಪಿಯ ಕುರಿತು / ಸಂಘ ಪರಿವಾರದ ಕುರಿತು ಹಲವಾರು ಭಯಾನಕ ಸಂಗತಿಗಳನ್ನು ಸಮಾಜದ ಮುಂದೆ ಇಟ್ಟಿದ್ದರು. ನಾಡಿನ ಜನರು ಈ ಕುರಿತು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದಿದ್ದಾರೆ.

ಪರೇಶ್ ಮೇಸ್ತಾ ಕುಟುಂಬಕ್ಕೆ ಅನ್ಯಾಯವಾಗಿದೆ. ಇದು ಆಘಾತಕಾರಿಯಾಗಿದ್ದು, ನೇಮಕಾತಿ ರದ್ದುಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ ಎಂದು ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ ಟಿಎನ್‌ಐಇಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದಾಗ್ಯೂ, ವಕ್ಫ್ ಮಂಡಳಿಯ ಸದಸ್ಯರ ಶಿಫಾರಸುಗಳ ಆಧಾರದ ಮೇಲೆ ನೇಮಕಾತಿಗಳನ್ನು ಮಾಡಲಾಗುತ್ತದೆ ಎಂದು ಅವರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. 

ಸಿಎಂ ಗಮನಕ್ಕೂ ಬಂದಿರಲಿಲ್ಲ:
ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ವಕ್ಫ್ ಮಂಡಳಿ ಕಾಂಗ್ರೆಸ್‌ ಕೈಯಲ್ಲಿದೆ. ಇದು ಮಾಡಿರುವ ಆದೇಶ ಮುಖ್ಯಮಂತ್ರಿಗಳ ಗಮನಕ್ಕೂ ಬಂದಿಲ್ಲ ಎಂದು ಹೇಳಿದ್ದಾರೆ.

ಎಚ್ಚೆತ್ತ ಸರ್ಕಾರಿಂದ ನೇಮಕಕ್ಕೆ ತಡೆ
ಈ ಬೆಳವಣಿಗೆಗಳ ಬಳಿಕ ಎಚ್ಚೆತ್ತ ಮುಜರಾಯಿ, ಹಜ್‌ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಅವರು ರಾಜ್ಯ ವಕ್ಫ್ ಮಂಡಳಿಗೆ ಶುಕ್ರವಾರ ಟಿಪ್ಪಣಿ ಬರೆದು ತಕ್ಷಣ ಈ ಆದೇಶ ತಡೆಹಿಡಿಯಲು ಸೂಚಿಸಿದ್ದರು. ಸಚಿವರ ಟಿಪ್ಪಣಿ ಆಧರಿಸಿ ವಕ್ಫ್ ಮಂಡಳಿಯು ಉತ್ತರ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್‌ ಸಲಹಾ ಸಮಿತಿ ರಚಿಸಿದ್ದ ಆದೇಶವನ್ನು ತಡೆಹಿಡಿದಿದೆ. ಸಲಹಾ ಸಮಿತಿ ನೇಮಕಕ್ಕೆ ತಡೆ ನೀಡಿ ಮತ್ತೊಂದು ಆದೇಶ ಹೊರಡಿಸಿದೆ. KSBA/ADM/CR/01/2020-21-21/p ದಿನಾಂಕ ಆಗಸ್ಟ್ 12, 2022, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರ ಟಿಪ್ಪಣಿಯನ್ನು ಅನುಸರಿಸಿ ಆಗಸ್ಟ್ 1, 2022 ದಿನಾಂಕದ ನೇಮಕಾತಿಯನ್ನು ತಡೆಹಿಡಿಯಲಾಗಿದೆ. "ಸಲಹಾ ಸಮಿತಿಯ ವಿರುದ್ಧ ಹಲವಾರು ದೂರುಗಳಿವೆ ಮತ್ತು ಇದನ್ನು ಪರಿಗಣಿಸಿ, ಆಗಸ್ಟ್ 1, 2022 ರ ಆದೇಶವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ" ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸಿಇಒ ಸಹಿ ಮಾಡಿದ ಆದೇಶದಲ್ಲಿ ತಿಳಿಸಲಾಗಿದೆ.

ಜಮಾಲ್ ಪ್ರತಿಕ್ರಿಯೆ
ಇನ್ನು ವಿವಾದಗಳ ಬಳಿಕ ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಜಮಾಲ್, ಸರ್ಕಾರದ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ. 'ನನ್ನ ವಿರುದ್ಧ ಆರೋಪಗಳಿವೆ. ಅವಲ್ಲ ಸತ್ಯಕ್ಕೆ ದೂರವಾದವು. ನನ್ನನ್ನು ತಪ್ಪಾಗಿ ಪ್ರಕರಣಕ್ಕೆ ಎಳೆದುತರಲಾಗಿದೆ ಮತ್ತು ಇದರಿಂದ ಮಾನಸಿಕವಾಗಿ ನೊಂದಿದ್ದೇನೆ, ಆದರೆ ನಮ್ಮ ನ್ಯಾಯಾಂಗದ ಮೇಲೆ ನನಗೆ ನಂಬಿಕೆಯಿದೆ. ನಾನು ನಿರಪರಾಧಿಯಾಗಿ ಹೊರಬರುತ್ತೇನೆ ಎಂದು ಅವರು ಹೇಳಿದರು.

2017ರ ಡಿಸೆಂಬರ್‌ನಲ್ಲಿ ಹೊನ್ನಾವರ ಪಟ್ಟಣದಲ್ಲಿ ನಡೆದ ಗಲಭೆಯೊಂದರಲ್ಲಿ ಪಟ್ಟಣದ ಪರೇಶ್‌ ಮೇಸ್ತಾ ಎನ್ನುವ ಯುವಕ ನಾಪತ್ತೆಯಾಗಿ, ಎರಡು ದಿನಗಳ ನಂತರ ಶವವಾಗಿ ಪಟ್ಟಣದ ಕೆರೆಯೊಂದರಲ್ಲಿ ಪತ್ತೆಯಾಗಿದ್ದ. ಮೇಸ್ತಾನನ್ನ ಕೋಮು ಗಲಭೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಈ ಪ್ರಕರಣವನ್ನು ಅಂದಿನ ಕಾಂಗ್ರೆಸ್‌ ಸರ್ಕಾರ ಸಿಬಿಐ ತನಿಖೆಗೆ ಸಹ ಒಪ್ಪಿಸಿತ್ತು. ಪ್ರಕರಣ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿ, ಜಮಾಲ್‌ ಅಜಾದ್‌ ಅಣ್ಣಿಗೇರಿ ಎಂಬಾತನನ್ನು ಪ್ರಮುಖ ಆರೋಪಿಯಾಗಿದ್ದು, ಬಂಧನಕ್ಕೂ ಒಳಗಾಗಿದ್ದ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com