ಶಿವಮೊಗ್ಗ ಗಲಭೆ ಘಟನೆಯಲ್ಲಿ 4 ಆರೋಪಿಗಳ ಗುರುತು, ಇಬ್ಬರ ಬಂಧನ, ಶಾಲೆ-ಕಾಲೇಜುಗಳಿಗೆ ರಜೆ: ಎಡಿಜಿಪಿ ಅಲೋಕ್ ಕುಮಾರ್
ಬೆಂಗಳೂರಿನಲ್ಲಿ ಟಿಪ್ಪು ಸುಲ್ತಾನ್ ಫ್ಲೆಕ್ಸ್ ನ್ನು ಹರಿದು ತೋರಿದ ವರ್ತನೆಗೆ ಪ್ರತಿಯಾಗಿ ಎಂಬಂತೆ ನಿನ್ನೆ 75ನೇ ಸ್ವಾತಂತ್ರ್ಯೋತ್ಸವದಂದು ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ವೀರ್ ಸಾವರ್ಕರ್(Veer Savarkar) ಮತ್ತು ಟಿಪ್ಪು ಸುಲ್ತಾನ್(Tipu Sultan) ಫ್ಲೆಕ್ಸ್ ವಿಚಾರವಾಗಿ ಭಾರೀ ಗಲಾಟೆ ನಡೆದು ಸದ್ಯ ಬಿಗುವಿನ ವಾತಾವರಣವಿದೆ.
Published: 16th August 2022 09:59 AM | Last Updated: 16th August 2022 11:38 AM | A+A A-

ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಫ್ಲೆಕ್ಸ್-ಟಿಪ್ಪು ಸುಲ್ತಾನ್ ಫ್ಲೆಕ್ಸ್ ವಿಚಾರದಲ್ಲಿ ಗಲಾಟೆ, ಒಳಚಿತ್ರದಲ್ಲಿ ಎಡಿಜಿಪಿ ಅಲೋಕ್ ಕುಮಾರ್
ಶಿವಮೊಗ್ಗ: ಬೆಂಗಳೂರಿನಲ್ಲಿ ಟಿಪ್ಪು ಸುಲ್ತಾನ್ ಫ್ಲೆಕ್ಸ್ ನ್ನು ಹರಿದು ತೋರಿದ ವರ್ತನೆಗೆ ಪ್ರತಿಯಾಗಿ ಎಂಬಂತೆ ನಿನ್ನೆ 75ನೇ ಸ್ವಾತಂತ್ರ್ಯೋತ್ಸವದಂದು ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ವೀರ್ ಸಾವರ್ಕರ್(Veer Savarkar) ಮತ್ತು ಟಿಪ್ಪು ಸುಲ್ತಾನ್(Tipu Sultan) ಫ್ಲೆಕ್ಸ್ ವಿಚಾರವಾಗಿ ಭಾರೀ ಗಲಾಟೆ ನಡೆದು ಸದ್ಯ ಬಿಗುವಿನ ವಾತಾವರಣವಿದೆ.
ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಎಡಿಜಿಪಿ ಅಲೋಕ್ ಕುಮಾರ್, ಈಗಾಗಲೇ 21 ಪೊಲೀಸ್ ತುಕಡಿಗಳನ್ನು ನಾವು ಬಿಗಿ ಭದ್ರತೆಗೆ ಕೇಳಲಾಗಿದ್ದು ಈಗಾಗಲೇ 15 ಇದೆ. ಬೇರೆ ಬೇರೆ ಜಿಲ್ಲೆಯಿಂದ ದಾವಣಗೆರೆ ಪೂರ್ವ ಭಾಗಿಂದ ಪೊಲೀಸ್ ಅಧಿಕಾರಿಗಳು ಬಂದಿದ್ದಾರೆ. ಹೊರಗಿನಿಂದ ಎಸ್ಪಿ ಕಾರ್ತಿಕ್ ಎಸ್ಪಿ, ಮೂವರು ಹೆಚ್ಚುವರಿ ಎಸ್ಪಿಗಳು ಬರುತ್ತಿದ್ದಾರೆ.
ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಗುರುತಿಸಿ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದ್ದು, ಮತ್ತಿಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ತೀವ್ರ ತನಿಖೆ ನಡೆಸಲಾಗುತ್ತಿದ್ದು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.
ಸಿಐಡಿಯಿಂದ ಐದು ಮಂದಿ ಡಿಎಸ್ಪಿ ಮತ್ತು ಹತ್ತು ಮಂದಿ ಇನ್ಸ್ ಪೆಕ್ಟರ್ ಗಳನ್ನು ಕರೆದಿದ್ದೇವೆ. ಸಾಕಷ್ಟು ಬಂದೋಬಸ್ತ್ ಮಾಡುತ್ತಿದ್ದೇವೆ. ಅನವಶ್ಯಕವಾಗಿ ಜನರು ಓಡಾಡದಂತೆ, ಕಲ್ಲುತೂರಾಟ, ಅನಗತ್ಯ ಗಲಾಟೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದರು.
ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಲಾಗುತ್ತಿದ್ದು ಯಾವ ಸಂಘಟನೆಗೆ ಸೇರಿದವರು ಎಂದು ಈಗಲೇ ಕಂಡುಬರುತ್ತಿಲ್ಲ ಎಂದರು.
ಚಾಕು ಇರಿತದ ನಂತರ ಮುಂಜಾಗ್ರತಾ ಕ್ರಮವಾಗಿ ದೊಡ್ಡಪೇಟೆ, ಕೋಟೆ, ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯ ರಾಗಿಗುಡ್ಡದಲ್ಲೂ ಭದ್ರತೆ ಒದಗಿಸಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ ಪ್ರಕರಣ ಹೆಚ್ಚಾಗುತ್ತಲೇ ಇದೆ, ನಗರದೆಲ್ಲೆಡೆ ವಾಹನಗಳ ತಪಾಸಣೆ ನಡೆಸುತ್ತೇವೆ. ಭದ್ರತೆಗಾಗಿ 15 ಪ್ಲಟೂನ್ ಬಂದಿದ್ದು, ಇನ್ನೂ 6 ಪ್ಲಟೂನ್ ಬರಲಿವೆ. ಹೆಚ್ಚುವರಿಯಾಗಿ ಓರ್ವ ಎಸ್ಪಿ, ಮೂವರು ಹೆಚ್ಚುವರಿ ಎಸ್ಪಿ ಸಿಐಡಿಯ ಮೂವರು ಡಿವೈಎಸ್ಪಿ, 10 ಇನ್ಸ್ಪೆಕ್ಟರ್ ಅವರನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ನಡೆದ ಘಟನೆಯೇನು?: ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ನಿನ್ನೆ 75 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆದಿತ್ತು. ಹೀಗಾಗಿ ಸರ್ಕಲ್ ಪಕ್ಕದಲ್ಲೇ ಮುಸ್ಲಿಂ ಸಂಘಟನೆಗಳು ವೇದಿಕೆ ರೆಡಿಮಾಡಿ ಟಿಪ್ಪು ಫೋಟೋ ಹಾಕಿದರು. ಸರ್ಕಲ್‌ನಲ್ಲಿದ್ದ ಹೈಮಾಸ್ ಲೈಟ್ ಬಳಿ ಹಿಂದೂಪರ ಸಂಘಟನೆಗಳು ವೀರ ಸಾವರ್ಕರ್ ಪ್ಲೆಕ್ಸ್ ಅಳವಡಿಸಿದರು. ಇದಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಮುಸ್ಲಿಂ ಸಂಘಟನೆವರು ಸರ್ಕಲ್‌ನಲ್ಲೇ ಪ್ರತಿಭಟನೆ ಆರಂಭಿಸಿದರು. ಸಾವರ್ಕರ್ ಪ್ಲೆಕ್ಸ್ ತೆರವಿಗೆ ಆಗ್ರಹಿಸಿದರು. ಈ ವೇಳೆ ಕೆಲ ಕಿಡಿಗೇಡಿಗಳು ನೋಡನೋಡುತ್ತಿದ್ದಂತೆ ಸರ್ಕಲ್ ಒಳಗೆ ನುಗ್ಗಿ ಸಾವರ್ಕರ್ ಪ್ಲೆಕ್ಸ್ ಕಿತ್ತೆಸಿದರು. ಆಗ ಲಾಠಿಚಾರ್ಜ್ ಆರಂಭವಾಯಿತು. ಪರಿಸ್ಥಿತಿ ಕೈ ಮೀರಿದಾಗ ಪೊಲೀಸರು ಲಾಠಿಪ್ರಹಾರ ನಡೆಸಿದರು. ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ ಇಡಲು ಬಂದಿದ್ದವರನ್ನ ಚದುರಿಸಿದರು.
ಶಾಲಾ-ಕಾಲೇಜುಗಳಿಗೆ ರಜೆ: ಶಿವಮೊಗ್ಗದಲ್ಲಿ ಕೋಮು ಸಂಘರ್ಷ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರ, ಭದ್ರಾವತಿ ಪಟ್ಟಣದ ಶಾಲಾ ಕಾಲೇಜಿಗೆ ಇಂದು ರಜೆ ರಜೆ ಘೋಷಿಸಿ ಡಿಸಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ, ಭದ್ರಾವತಿಯಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.ಇಂದು ನಡೆಯಬೇಕಿದ್ದ ಕುವೆಂಪು ವಿವಿಯ ಪರೀಕ್ಷೆಗಳು ಮುಂದೂಡಿಕೆಯಾಗಿವೆ ಎಂದು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ನವೀನ್ ಕುಮಾರ್ ಹೇಳಿದ್ದಾರೆ.