ಹವಾಮಾನ ಬದಲಾವಣೆ ಸವಾಲಿಗೆ ಸ್ಥಳೀಯ ದೃಷ್ಟಿಕೋನದ ಪರಿಹಾರ ಅಗತ್ಯ: ಸಚಿವ ಅಶ್ವತ್ಥ್ ನಾರಾಯಣ
ಕೈಗಾರಿಕಾ ಕ್ರಾಂತಿ ಮತ್ತಿತರ ಆಧುನಿಕ ಸಂಗತಿಗಳಿಂದ ಹವಾಮಾನ ಬದಲಾವಣೆ ತರಹದ ಗಂಭೀರ ಸಮಸ್ಯೆಗಳು ಎದುರಾಗಿವೆ. ಇವುಗಳಿಗೆ ಪಾಶ್ಚಾತ್ಯ ಮಾದರಿಯ ಪರಿಹಾರಗಳು ದುಬಾರಿಯಾಗಿವೆ.
Published: 19th August 2022 09:46 PM | Last Updated: 19th August 2022 09:46 PM | A+A A-

ಅಶ್ವತ್ಥ್ ನಾರಾಯಣ
ಬೆಂಗಳೂರು: ಕೈಗಾರಿಕಾ ಕ್ರಾಂತಿ ಮತ್ತಿತರ ಆಧುನಿಕ ಸಂಗತಿಗಳಿಂದ ಹವಾಮಾನ ಬದಲಾವಣೆ ತರಹದ ಗಂಭೀರ ಸಮಸ್ಯೆಗಳು ಎದುರಾಗಿವೆ. ಇವುಗಳಿಗೆ ಪಾಶ್ಚಾತ್ಯ ಮಾದರಿಯ ಪರಿಹಾರಗಳು ದುಬಾರಿಯಾಗಿವೆ. ಆದ್ದರಿಂದ ದೇಶೀಯ ಮಾದರಿಯ ಪರಿಹಾರಗಳನ್ನು ಕಂಡುಕೊಳ್ಳಬೇಕಾದ ಜರೂರಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಸಲಹೆ ನೀಡಿದ್ದಾರೆ.
'ಪರ್ಯಾವರಣ ಗತಿ ವಿಧಾ' ಸಂಘಟನೆಯು ನಗರದ ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿರುವ ಎರಡು ದಿನಗಳ 'ಇಕೋ ಯೂತ್ ಸ್ಟಾರ್ಟಪ್ ಸಮಾವೇಶ-2022'ರ ಉದ್ಘಾಟನಾ ಸಮಾರಂಭದಲ್ಲಿ ಅವರು ಶುಕ್ರವಾರ ಮಾತನಾಡಿದರು.
ಇಂದು ಹುಟ್ಟುತ್ತಿರುವ ಮಕ್ಕಳ ರಕ್ತದಲ್ಲೇ ಪ್ಲಾಸ್ಟಿಕ್ ಸೇರಿದೆ. ಇದರ ಜತೆಗೆ ಕೈಗಾರಿಕಾ ತ್ಯಾಜ್ಯ, ಜಲ ಮಾಲಿನ್ಯ, ಮನೆಯಲ್ಲಿ ಉತ್ಪತ್ತಿ ಆಗುತ್ತಿರುವ ವಿಷಯುಕ್ತ ರಾಸಾಯನಿಕಗಳು, ವಾಹನಗಳು ಸೃಷ್ಟಿಸುತ್ತಿರುವ ಮಾಲಿನ್ಯ ಎಲ್ಲವೂ ಸೇರಿಕೊಂಡು ಬದುಕು ಚಕ್ರವ್ಯೂಹದಂತೆ ಆಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇಂತಹ ಸಂದರ್ಭಗಳಲ್ಲಿ ನಮ್ಮ ಉದ್ಯಮಿಗಳು ನಾವೀನ್ಯತೆಗೆ ಒತ್ತು ಕೊಡುವ ನವೋದ್ಯಮಗಳನ್ನು ಸ್ಥಾಪಿಸುವುದೇ ಇದಕ್ಕೆ ಪರಿಹಾರವಾಗಿದೆ. ಇವು ಪರಿಸರದಲ್ಲಿ ಸುಸ್ಥಿರತೆ ಕಾಪಾಡಬೇಕು ಎಂದು ಅವರು ನುಡಿದರು.
ಭಾರತೀಯರು ತಮ್ಮತನವನ್ನು ಮರೆತು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವಂತಹ ಅಗ್ಗದ ವಸ್ತುಗಳಿಗೆ ಮಾರು ಹೋಗುತ್ತಿರುವುದು ಸರಿಯಲ್ಲ. ಇದರಿಂದ ಪರಿಸರಕ್ಕೆ ಹಾನಿಕಾರಕವಾದ ವಸ್ತುಗಳು ಸೇರುತ್ತಿವೆ. ಇದರ ಬದಲು ನೈಸರ್ಗಿಕ ಉತ್ಪನ್ನಗಳ ಬಳಕೆಗೆ ನಾವು ಮರಳಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.
ಸಮಾವೇಶದಲ್ಲಿ 200ಕ್ಕೂ ಹೆಚ್ಚು ಸ್ಟಾರ್ಟಪ್ ಗಳು ಮತ್ತು 70ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸಿವೆ. ಸಂಘ ಪರಿವಾರದ ಪ್ರಮುಖರಾದ ತಿಪ್ಪೇಸ್ವಾಮಿ ಸೇರಿದಂತೆ ಇತರರು ಇದ್ದರು.