
ಮದ್ಯದ ಅಂಗಡಿ (ಸಂಗ್ರಹ ಚಿತ್ರ)
ದಾವಣಗೆರೆ: ಸಿದ್ದರಾಮೋತ್ಸವದ ದಿನ (ಆ.03) ರಂದು ದಾವಣಗೆರೆಯಲ್ಲಿ ಮದ್ಯ ಮಾರಾಟ 5 ಪಟ್ಟು ಹೆಚ್ಚಳವಾಗಿತ್ತು ಎಂದು ಆರ್ ಟಿಐ ಗೆ ಬಂದ ಪ್ರತಿಕ್ರಿಯೆ ಮೂಲಕ ತಿಳಿದುಬಂದಿದೆ.
ಸಾಮಾಜಿಕ ಕಾರ್ಯಕರ್ತ ಕೆಸಿ ರಾಜಣ್ಣ ಆರ್ ಟಿಐ ಅರ್ಜಿ ಸಲ್ಲಿಸಿ ಆ.03 ರಂದು ಮಾರಾಟವಾಗಿದ್ದ ಮದ್ಯದ ವಿವರಗಳನ್ನು ಕೇಳಿದ್ದರು. ಕರ್ನಾಟಕ ರಾಜ್ಯ ಪಾನೀಯಗಳ ನಿಗಮ ನಿಯಮಿತ, ದಾವಣಗೆರೆ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಆ ದಿನದಂದು 1,62,10,734 ರೂಪಾಯಿ ಮೌಲ್ಯದ 3,02,164 ಮದ್ಯದ ಬಾಟಲ್ ಗಳು ಮಾರಾಟವಾಗಿತ್ತು ಎಂದು ಹೇಳಿದೆ.
ರಾಜಣ್ಣ ಅವರ ಪ್ರಕಾರ ದಾವಣಗೆರೆಯಲ್ಲಿ ದಿನವೊಂದಕ್ಕೆ 30-40 ಲಕ್ಷ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗುತ್ತಿತ್ತು. ಆದರೆ ಸಿದ್ದರಾಮೋತ್ಸವದ ದಿನದಂದು ಎಂದಿಗಿಂತಲೂ 5 ಪಟ್ಟು ಹೆಚ್ಚು ಮದ್ಯ ಮಾರಾಟವಾಗಿದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ, 75ನೇ ಹುಟ್ಟುಹಬ್ಬಕ್ಕೆ 'ಟಗರು' ಭರ್ಜರಿ ಶೋ, ಸಂಚಾರ ದಟ್ಟಣೆ
ಮದ್ಯ ಖರೀದಿಗೆ ಸಂಬಂಧಿಸಿದಂತೆ 52 ರೀಟೆಲರ್ ಗಳಿಂದ 1,169 ಇನ್ವಾಯ್ಸ್ ಗಳಿವೆ. ಬಿಯರ್, ವಿಸ್ಕಿ, ರಮ್, ವೈನ್, ಬ್ರಾಂಡಿ, ವೋಡ್ಕಾ, ಜಿನ್ ಸೇರಿದಂತೆ 60 ಬ್ರಾಂಡ್ ಗಳ ಮದ್ಯ ಸಿದ್ದರಾಮೋತ್ಸವದ ದಿನದಂದು ಮಾರಾಟವಾಗಿದೆ ಎಂದು ರಾಜಣ್ಣ ಹೇಳಿದ್ದಾರೆ
ಕೆಲವೊಂದು ಐಷಾರಾಮಿ ಬ್ರಾಂಡ್ ಗಳ ಮದ್ಯದ ಮಾರಾಟವೂ ಆ ದಿನ ಏರಿಕೆ ಕಂಡಿತ್ತು. 10 ಲಕ್ಷ ಮಂದಿ ಸೇರಿದ್ದ ಕಾರ್ಯಕ್ರಮಕ್ಕೆ 20 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು.