ಪರಿಸರ ಸ್ನೇಹಿ ಗಣೇಶಗಳನ್ನು ಬಿಟ್ಟು ರಾಸಾಯನಿಕ ಬಣ್ಣ ಹೊಂದಿರುವ ಗಣೇಶ ಮೂರ್ತಿಗಳಿಗೆ ಭಾರಿ ಬೇಡಿಕೆ!

ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಕೂಡ, ರಾಸಾಯನಿಕ ಬಣ್ಣದಿಂದ ಕೂಡಿದ ಮೂರ್ತಿಗಳು ಹೆಚ್ಚು ಆಕರ್ಷಕವಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಕೂಡ, ರಾಸಾಯನಿಕ ಬಣ್ಣದಿಂದ ಕೂಡಿದ ಮೂರ್ತಿಗಳು ಹೆಚ್ಚು ಆಕರ್ಷಕವಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಪರಿಣಾಮವಾಗಿ, ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಕೆಲವು ಮಾರಾಟಗಾರರು ಕಾರ್ಖಾನೆಗಳಿಂದ ರಾಸಾಯನಿಕ ಬಣ್ಣದ ವಿಗ್ರಹಗಳನ್ನು ಖರೀದಿಸುತ್ತಿದ್ದಾರೆ. ಸಾರಿಗೆ ವೆಚ್ಚವನ್ನು ಉಲ್ಲೇಖಿಸಿ ಅವರು ವಿಗ್ರಹಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

'ತಮ್ಮ ಮಕ್ಕಳೊಂದಿಗೆ ಬರುವ ಪೋಷಕರು ಯಾವಾಗಲೂ ಬೆಲೆಯನ್ನು ಲೆಕ್ಕಿಸದೆ ಬಣ್ಣವನ್ನು ಆರಿಸಿಕೊಳ್ಳುತ್ತಾರೆ. ಏಕೆಂದರೆ, ಅದು ಆಕರ್ಷಕ ಮತ್ತು ಮಕ್ಕಳು ಅವುಗಳ ಬಗ್ಗೆ ಉತ್ಸುಕರಾಗುತ್ತಾರೆ. ಆದಾಗ್ಯೂ, ಹಿರಿಯರು ಮಾತ್ರ ಮಣ್ಣಿನ ವಿಗ್ರಹಗಳಿಗೆ ಆದ್ಯತೆ ನೀಡುತ್ತಿದ್ದಾರೆ' ಎಂದು ಗಂಗಾನಗರದಲ್ಲಿ ಮೆಟಾಲಿಕ್ ಬಣ್ಣ ಮತ್ತು ಮಣ್ಣಿನ ವಿಗ್ರಹಗಳ ವ್ಯಾಪಕ ಶ್ರೇಣಿಯನ್ನು ಹೊಂದಿರುವ ಮಾರಾಟಗಾರ ಚಂದು ಹೇಳುತ್ತಾರೆ.

ಜೇಡಿಮಣ್ಣಿನ ವಿಗ್ರಹಗಳನ್ನು ಮಾರಾಟಗಾರರು ಸ್ವತಃ ಕೈಯಿಂದ ತಯಾರಿಸುತ್ತಾರೆ. ಒಂದು ದೊಡ್ಡ ವಿಗ್ರಹವನ್ನು ಮಾಡಲು ಸುಮಾರು ಎರಡು ಗಂಟೆ ಬೇಕಾದರೆ, ಚಿಕ್ಕ ವಿಗ್ರಹ ತಯಾರಿಸಲು ಒಂದು ಗಂಟೆ ಅವಶ್ಯವಿರುತ್ತದೆ. ಒಂದು ಬ್ಯಾಚ್ ಅನ್ನು ಮಾರಾಟ ಮಾಡಲು ಸುಮಾರು ಮೂರ್ನಾಲ್ಕು ದಿನಗಳು ಬೇಕಾಗುತ್ತದೆ ಎನ್ನುತ್ತಾರೆ ಮತ್ತೊಬ್ಬ ಮಾರಾಟಗಾರ.

'ನಾವು ಬಹಳ ಸಮಯದ ನಂತರ ವಿಗ್ರಹವನ್ನು ಖರೀದಿಸುತ್ತಿದ್ದೇವೆ. ನಾವು ಆರಂಭದಲ್ಲಿ ಪರಿಸರ ಸ್ನೇಹಿ ಒಂದನ್ನು ಖರೀದಿಸಲು ಬಯಸಿದ್ದೆವು... ಆದರೆ ಗಾಢ ಬಣ್ಣಗಳಿರುವ ದೊಡ್ಡ ವಿಗ್ರಹವನ್ನು ನಾವು ನಿಜವಾಗಿಯೂ ಇಷ್ಟಪಟ್ಟಿದ್ದೇವೆ ಮತ್ತು ಅದು ನಮ್ಮ ಬಜೆಟ್‌ಗೆ ಸರಿಹೊಂದುತ್ತದೆ ಎಂದು ಗ್ರಾಹಕ ಮಹೇಶ್ ಹೇಳುತ್ತಾರೆ.

ಕೆಲವೇ ಜನರು ಮಾತ್ರ ಪರಿಸರ ಸ್ನೇಹಿ ವಿಗ್ರಹಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ. ಆದರೆ ಅವರು ಚೌಕಾಶಿ ಮಾಡಲು ಪ್ರಯತ್ನಿಸುತ್ತಾರೆ. ಇದು ಅಂತಿಮವಾಗಿ ಮಾರಾಟಗಾರರನ್ನು ನಷ್ಟಕ್ಕೆ ತಳ್ಳುತ್ತದೆ. ಏಕೆಂದರೆ, ಉತ್ಪಾದನಾ ವೆಚ್ಚವು ಈ ವಿಗ್ರಹಗಳ ಮಾರಾಟದಲ್ಲಿ ಸಿಗುವುದಿಲ್ಲ. ಆದ್ದರಿಂದಲೇ ವಿಗ್ರಹಗಳನ್ನು ಹೆಚ್ಚು ಆಕರ್ಷಕವಾಗಿಸಲು, ಕೆಲವು ಮಾರಾಟಗಾರರು ರಾಸಾಯನಿಕ ಮುಕ್ತ ಜೇಡಿಮಣ್ಣಿನ ವಿಗ್ರಹದ ಮೇಲೆ ಚಿನ್ನದ ಲೋಹೀಯ ಬಣ್ಣವನ್ನು ಬಳಸಿ ಅದರ ವೈಶಿಷ್ಟ್ಯಗಳನ್ನು ಎತ್ತಿ ತೋರಿಸುತ್ತಾರೆ ಮತ್ತು ಈ ಪ್ರಕ್ರಿಯೆಯಲ್ಲಿ ವಿಗ್ರಹದ ಮೂಲ ಅಂಶವು ಕಳೆದುಹೋಗುತ್ತದೆ ಎಂದು ವಿಗ್ರಹ ತಯಾರಕರು ಹೇಳುತ್ತಾರೆ.

ಸಾರ್ವಜನಿಕ ಪಂಡಲ್‌ಗಳಿಗೆ ನಿಯಮಗಳು

ಗಣೇಶ ಚತುರ್ಥಿ ಆಚರಣೆಗೆ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಪಡೆಯಲು ಯೋಜಿಸುವ ಪೆಂಡಾಲ್ ಸಂಘಟಕರಿಗೆ ಬೆಸ್ಕಾಂ ಸೋಮವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪಾಲಿಕೆಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆದು ಸಂಬಂಧಪಟ್ಟ ಬೆಸ್ಕಾಂ ಉಪವಿಭಾಗಕ್ಕೆ ಸಲ್ಲಿಸಿ ಅಗತ್ಯ ಶುಲ್ಕ ಪಾವತಿಸಿ ಅನುಮೋದನೆ ಪಡೆಯುವಂತೆ ಸಾರ್ವಜನಿಕ ಗಣೇಶ ಮಂಟಪಗಳ ಸಂಘಟಕರಿಗೆ ಬೆಸ್ಕಾಂ ಸೂಚಿಸಿದೆ. ವಿದ್ಯುತ್ ಸಂಬಂಧಿತ ಅಪಘಾತದ ಸಂದರ್ಭದಲ್ಲಿ, ಸಂಬಂಧಪಟ್ಟ ಸಂಘಟಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಗಣೇಶ ಮೂರ್ತಿ ಮೆರವಣಿಗೆ ಮತ್ತು ವಿಸರ್ಜನೆ ದಿನಾಂಕಗಳನ್ನು ಮುಂಚಿತವಾಗಿಯೇ ಬೆಸ್ಕಾಂ ಸಿಬ್ಬಂದಿಗೆ ಒದಗಿಸಬೇಕು ಎಂದು ಸೂಚಿಸಿದೆ.

ಎರಡು ಸಾವಿರ ಅರ್ಜಿ ತೆರವು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ತನ್ನ ಎಲ್ಲಾ ಎಂಟು ವಲಯಗಳಿಂದ ಗಣೇಶ ಮಂಟಪಗಳನ್ನು ಸ್ಥಾಪಿಸಲು ಅನುಮತಿ ಕೋರಿ ಸಲ್ಲಿಕೆಯಾಗಿದ್ದ 2,000 ಕ್ಕೂ ಹೆಚ್ಚು ಅರ್ಜಿಗಳನ್ನು ತೆರವುಗೊಳಿಸಿದೆ. 63 ಉಪವಿಭಾಗಗಳಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಲು ಏಕಗವಾಕ್ಷಿ ವ್ಯವಸ್ಥೆಯನ್ನು ಪರಿಚಯಿಸಿರುವುದು ಇದೇ ಮೊದಲು. ನಗರ ಪೊಲೀಸರು ಕೂಡ ಕಾನೂನು ಸುವ್ಯವಸ್ಥೆ ಕಾಪಾಡಲು ವ್ಯಾಪಕ ಬಂದೋಬಸ್ತ್ ಮಾಡಿದ್ದಾರೆ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ 1,500 ಪೊಲೀಸರನ್ನು ನಿಯೋಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com