ರಾಜ್ಯದಲ್ಲಿ ಹೆರಿಗೆ ವೇಳೆ ತಾಯಂದಿರ ಮರಣ ಪ್ರಮಾಣ ಇಳಿಕೆ!

ರಾಜ್ಯದಲ್ಲಿ ಹೆರಿಗೆ ವೇಳೆ ಸಂಭವಿಸುವ ತಾಯಿ ಮರಣ ಪ್ರಮಾಣ ಇಳಿಮುಖವಾಗುತ್ತಿದ್ದು, ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸುಧಾರಿಸಿದೆ ಎಂದು ರಿಜಿಸ್ಟ್ರಾರ್ ಜನರಲ್ ಕಚೇರಿಯ ವರದಿಯಲ್ಲಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಹೆರಿಗೆ ವೇಳೆ ಸಂಭವಿಸುವ ತಾಯಿ ಮರಣ ಪ್ರಮಾಣ ಇಳಿಮುಖವಾಗುತ್ತಿದ್ದು, ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸುಧಾರಿಸಿದೆ ಎಂದು ರಿಜಿಸ್ಟ್ರಾರ್ ಜನರಲ್ ಕಚೇರಿಯ ವರದಿಯಲ್ಲಿ ತಿಳಿಸಿದೆ.

2016-18ರ ವರದಿಯ ಪ್ರಕಾರ ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಹೆರಿಗೆಗೆ 92 ತಾಯಂದಿರು ಮೃತಪಡುತ್ತಿದ್ದರು. 2017-19ರಲ್ಲಿ ಮರಣ ಪ್ರಮಾಣ 83 ರಷ್ಟು ಇಳಿಕೆಯಾಗಿತ್ತು. ಪ್ರಸ್ತುತ 69ಕ್ಕೆ ತಗ್ಗಿದ್ದು, ರಾಜ್ಯ 8ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಅಧಿಕಾರಿಗಳು, ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಶೇ.14ರಷ್ಟು ಇಳಿಕೆಯಾಗಿದೆ.

ಕಡಿಮೆ ಮರಣ ಪ್ರಮಾಣ ಹೊಂದಿರುವ ರಾಜ್ಯಗಳಲ್ಲಿ ಕೇರಳ (19), ಮಹಾರಾಷ್ಟ್ರ (33), ತೆಲಂಗಾಣ (43), ಆಂಧ್ರಪ್ರದೇಶ (45) ಹಾಗೂ ತಮಿಳುನಾಡು (54) ಕ್ರಮವಾಗಿ ಮೊದಲ ಐದು ಸ್ಥಾನದಲ್ಲಿವೆ. ಈ ಪಟ್ಟಿಯಲ್ಲಿ ಅಸ್ಸಾಂ (195) ಕಡೆಯ ಸ್ಥಾನದಲ್ಲಿದೆ. ದಕ್ಷಿಣದ ಐದು ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರ ಮರಣ ವರದಿಯಾಗುತ್ತಿದೆ.

ದೇಶದಲ್ಲಿ ತಾಯಂದಿರ ಸಾವಿನ ಪ್ರಮಾಣ ಶೇ.97ಕ್ಕೆ ಇಳಿಕೆಯಾಗಿದೆ. 2017-19 ರಲ್ಲಿ 103 ರಷ್ಟಿತ್ತು. 2014-16 ರಲ್ಲಿ 130, 2015-17 ರಲ್ಲಿ 122 ಹಾಗೂ 2016-18 ರಲ್ಲಿ 113 ರಷ್ಟಿತ್ತು. ಇನ್ನು ರಾಜ್ಯದಲ್ಲಿ 2011- 13 ಶೇ.133, 2014-16 ಶೇ.108. 2015-17 ಶೇ.97, 2016-18 ಶೇ.92, 2017-19 ಶೇ.83, 2018-20 ಶೇ.69 ರಷ್ಟಿತ್ತು.

ತಾಯಂದಿರ ಮರಣ ಪ್ರಮಾಣ ಕಡಿಮೆಯಾಗಲು ಜನರು ಜಾಗೃತರಾಗಬೇಕು. ವೈದ್ಯರ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಆಸ್ಪತ್ರೆಯಲ್ಲಿಯೇ ಹೆರಿಗೆಗೆ ಆದ್ಯತೆ ನೀಡಬೇಕು ತಾಯಂದಿರ ಮರಣ ಪ್ರಮಾಣ ಹೆಚ್ಚಿರುವ ಧಾರವಾಡ, ಯಾದಗಿರಿ, ಕಲಬುರಗಿ, ಬೀದರ್ ಮತ್ತು ರಾಯಚೂರಿನಲ್ಲಿ ಈಗ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಧಾರವಾಡ, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ಬೆಂಗಳೂರು ಗ್ರಾಮಾಂತರ ಮತ್ತು ನಗರ, ಯಾದಗಿರಿ, ದಾವಣಗೆರೆ, ಉಡುಪಿ, ಕಲಬುರಗಿ, ಬೀದರ್, ಶಿವಮೊಗ್ಗ ಮತ್ತು ರಾಯಚೂರಿನಲ್ಲಿ ಸರಾಸರಿ 69 ಕ್ಕಿಂತ ಹೆಚ್ಚು ತಾಯಂದಿರ ಮರಣ (ಎಂಎಂಆರ್) ವರದಿಯಾಗಿದೆ.

ಮರಣ ದರವನ್ನು ಕಡಿಮೆ ಮಾಡಲು ಆರೋಗ್ಯ ಇಲಾಖೆ ಜಿಲ್ಲಾವಾರು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ತಜ್ಞರು, ನರ್ಸ್ ಮತ್ತು ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಈ ಕ್ಷಣದ ಪ್ರಮುಖ ಅವಶ್ಯಕತೆಯಾಗಿದೆ ಎಂದು ತಿಳಿಸಿದ್ದಾರೆ.

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಬಲವರ್ಧನೆಯಿಂದ ಮಕ್ಕಳ ಸಾವಿನ ಪ್ರಕರಣಗಳು ಕಡಿಮೆಯಾಗಿವೆ. ವೈದ್ಯಕೀಯ ಸಿಬ್ಬಂದಿಗಳಲ್ಲಿ ಹೊಣೆಗಾರಿಕೆಯು ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಸುಧಾರಿಸಿದೆ. ಹೆಚ್ಚಿದ ಜಾಗೃತಿಯ ಹೊರತಾಗಿ, ಮಕ್ಕಳಿಗಾಗಿ, ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಹೆಚ್ಚಿದ ಯೋಜನೆಗಳು ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಹೆಚ್ಚಿನ ಸಿಬ್ಬಂದಿ ಮತ್ತು ತುರ್ತು ಸೌಲಭ್ಯಗಳೊಂದಿಗೆ ಸಮುದಾಯ ಆರೋಗ್ಯ ಕೇಂದ್ರಗಳನ್ನು ಇನ್ನಷ್ಟು ಸುಧಾರಿಸಬಹುದಾದರೂ, ಇದುವರೆಗಿನ ಸೇವೆಗಳು ವೈದ್ಯಕೀಯ ಆರೈಕೆ ಮತ್ತು ಹೆರಿಗೆಗಾಗಿ ಜನರಿಗೆ ಹೆಚ್ಚು ಹತ್ತಿರವಾಗುವಂತೆ ಮಾಡಲು ಸಹಾಯ ಮಾಡಿದೆ. ಇದಷ್ಟೇ ಅಲ್ಲದೆ, ಸೋಂಕು ಹರಡುವುದನ್ನು ನಿಯಂತ್ರಿಸಿರುವುದೂ ಕೂಡ ಮರಣ ದರ ಕಡಿಮೆಯಾಗಲು ಸಹಾಯ ಮಾಡಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com