ಗೋವಾ, ಕಾಸರಗೋಡು, ಸೊಲ್ಲಾಪುರದಲ್ಲಿ ತಲಾ 10 ಕೋಟಿ ರೂ. ವೆಚ್ಚದಲ್ಲಿ ಕನ್ನಡ ಭವನಗಳ ನಿರ್ಮಾಣ: ಸಿಎಂ ಬೊಮ್ಮಾಯಿ
ಗೋವಾ, ಕಾಸರಗೋಡು ಹಾಗೂ ಸೊಲ್ಲಾಪುರದಲ್ಲಿ ತಲಾ ರೂ 10 ಕೋಟಿ ವೆಚ್ಚದ ಕನ್ನಡ ಭವನಗಳ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Published: 02nd December 2022 05:46 PM | Last Updated: 02nd December 2022 06:32 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ರಾಮದುರ್ಗ: ಗೋವಾ, ಕಾಸರಗೋಡು ಹಾಗೂ ಸೊಲ್ಲಾಪುರದಲ್ಲಿ ತಲಾ ರೂ 10 ಕೋಟಿ ವೆಚ್ಚದ ಕನ್ನಡ ಭವನಗಳ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ನೀಡಲಾಗಿದೆ. ಇದಲ್ಲದೆ ಕರ್ನಾಟಕದ ಹೊರಗಿನ ಪುಣ್ಯಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳುವ ಕನ್ನಡಿಗ ಭಕ್ತಾದಿಗಳಿಗೆ ಅಲ್ಲಿ ವಸತಿಗಾಗಿ ಯಾತ್ರಾ ನಿವಾಸಗಳ ನಿರ್ಮಾಣಕ್ಕೆ ಕೂಡಾ ಮಂಜೂರಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳಗಾವಿಯ ರಾಮದುರ್ಗದಲ್ಲಿಂದು ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಅನಾವರಣ ಸೇರಿದಂತೆ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಲಪ್ರಭಾ ನದಿಯ ಪ್ರವಾಹದಿಂದ ಪದೇ ಪದೇ ಹಾನಿಗೊಳಗಾಗುತ್ತಿದ್ದ ರಾಮದುರ್ಗ ತಾಲೂಕಿನ ಹಳ್ಳಿಗಳ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಈಗ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ರಾಮದುರ್ಗ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.
ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ನಮ್ಮ ಸರ್ಕಾರದ ಸಂಕಲ್ಪವಾಗಿದ್ದು, ಪ್ರಾದೇಶಿಕ ಅಸಮತೋಲನತೆಯನ್ನು ಹೋಗಲಾಡಿಸುವುದು ನಮ್ಮ ಧ್ಯೇಯವಾಗಿದೆ. ಇತರ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ರಾಜ್ಯದ ಪ್ರದೇಶಗಳ 1,800 ಗ್ರಾಮ ಪಂಚಾಯತ್ ಗಳ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಯೋಜನೆ ರೂಪುಗೊಂಡಿದ್ದು, ಶೀಘ್ರದಲ್ಲಿಯೇ ಅನುಷ್ಠಾನಗೊಳ್ಳಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
"ಗೋವಾ,ಕಾಸರಗೋಡು ಹಾಗೂ ಸೊಲ್ಲಾಪುರದಲ್ಲಿ ತಲಾ ರೂ 10 ಕೋಟಿ ವೆಚ್ಚದ ಕನ್ನಡ ಭವನಗಳ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ನೀಡಲಾಗಿದೆ. ಇದಲ್ಲದೆ ಕರ್ನಾಟಕದ ಹೊರಗಿನ ಪುಣ್ಯಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳುವ ಕನ್ನಡಿಗ ಭಕ್ತಾದಿಗಳಿಗೆ ಅಲ್ಲಿ ವಸತಿಗಾಗಿ ಯಾತ್ರಾ ನಿವಾಸಗಳ ನಿರ್ಮಾಣಕ್ಕೆ ಕೂಡಾ ಮಂಜೂರಾತಿ ನೀಡಲಾಗಿದೆ."ಮುಖ್ಯಮಂತ್ರಿ: @BSBommai pic.twitter.com/iImOk3DugB
— CM of Karnataka (@CMofKarnataka) December 2, 2022