ಚಿರತೆ ದಾಳಿಗೆ ಮೃತಪಟ್ಟವರ ಕುಟುಂಬಕ್ಕೆ ತಲಾ 15 ಲಕ್ಷ ರೂ ಪರಿಹಾರ; ಸೆರೆಗೆ ವಿಶೇಷ ತಂಡ ರಚನೆ: ಸಿಎಂ ಬೊಮ್ಮಾಯಿ
ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
Published: 03rd December 2022 10:30 AM | Last Updated: 03rd December 2022 06:20 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರು ಮತ್ತು ಮೈಸೂರಿನ ಕೆಲವು ಭಾಗಗಳಲ್ಲಿ ಕಂಡುಬಂದಿರುವ ಚಿರತೆಗಳನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಚಿರತೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ನೀಡಿದಂತೆ ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೂ ಪರಿಹಾರ ನೀಡಲಾಗುವುದು. ಕಾಡಿನಲ್ಲಿದ್ದ ಚಿರತೆಗಳು ಈಗ ನಾಡಿನತ್ತ ಬರುತ್ತಿದ್ದು ಬೆಂಗಳೂರಿನ ಸುತ್ತಮುತ್ತ ಓಡಾಡುತ್ತಿರುವುದು ಜನತೆಯನ್ನು ಭಯಭೀತಗೊಳಿಸಿದೆ. ಚಿರತೆಯನ್ನು ಜೀವಂತವಾಗಿ ಸೆರೆಹಿಡಿದು ಕಾಡಿಗೆ ಬಿಡಲು ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ: ಮೈಸೂರು ಬಳಿ ಮತ್ತೆ ಕಾಣಿಸಿಕೊಂಡ ಚಿರತೆ; ತಾಯೂರು ಗ್ರಾಮದಲ್ಲಿ ದೃಶ್ಯ ಮೊಬೈಲ್ನಲ್ಲಿ ಸೆರೆ
ವಿಶೇಷ ತಂಡ: ಬೆಂಗಳೂರು ಮತ್ತು ಮೈಸೂರು ವಲಯದ ಆನೆ ಕಾರಿಡಾರ್ ಸುತ್ತಮುತ್ತ ಚಿರತೆಗಳಿವೆ. ಚಿರತೆ ದಾಳಿ ಆಗುತ್ತಿರುವುದನ್ನು ತಡೆಯಲು ವಿಶೇಷ ತಂಡ ರಚಿಸಲಾಗಿದೆ. ಬೆಂಗಳೂರು ಹೊರವಲಯದ ತುರಹಳ್ಳಿಯಲ್ಲಿ ಚಿರತೆ ಕಾಣಿಸಿಕೊಂಡು ಸುತ್ತಮುತ್ತಲ ಜನರಲ್ಲಿ ತೀವ್ರ ಆತಂಕವನ್ನುಂಟುಮಾಡಿದೆ. ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಅದೇ ರೀತಿ ಇತ್ತೀಚೆಗೆ ಮೈಸೂರು, ಮಂಡ್ಯದಲ್ಲಿಯೂ ಚಿರತೆ ಕಾಣಿಸಿಕೊಂಡಿತ್ತು.