ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸುವಂತೆ ತಂಬಾಕು ನಿಯಂತ್ರಣ ಸಂಸ್ಥೆಗಳಿಂದ ಕೇಂದ್ರ ಸರ್ಕಾರಕ್ಕೆ ಒತ್ತಾಯ

ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸುವಂತೆ ತಂಬಾಕು ನಿಯಂತ್ರಣ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಒತ್ತಾಯ ಹೇರಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸುವಂತೆ ತಂಬಾಕು ನಿಯಂತ್ರಣ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಒತ್ತಾಯ ಹೇರಿವೆ.

ಕ್ಯಾನ್ಸರ್ ತಡೆಗಟ್ಟುವಿಕೆ, ಯುವಜನ ರಕ್ಷಣೆ ಮತ್ತು ತಂಬಾಕು ನಿಯಂತ್ರಣಕ್ಕಾಗಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿರುವ ತಂಬಾಕು ಮುಕ್ತ ಕರ್ನಾಟಕ ವೇದಿಕೆ  (ಸಿಎಫ್‌ಟಿಎಫ್‌ಕೆ) ಮತ್ತು ಕರ್ನಾಟಕ ನೋ ಫಾರ್ ಟೊಬ್ಯಾಕೊ (ಏಓಔಖಿ) ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಎಲ್ಲ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದೆ. ಅಲ್ಲದೆ, ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕದ ಎಲ್ಲ ಸಂಸತ್ ಸದಸ್ಯರಿಗೂ ಪತ್ರ ಬರೆಯಲಾಗಿದೆ.

ಈ ಸಂಸ್ಥೆಗಳ ಪ್ರಕಾರ, ತಂಬಾಕು ಕಂಪನಿಗಳ ಪ್ರಮುಖ ಗುರಿಯಾಗಿರುವ ಯುವಜನರಿಗೆ ತಂಬಾಕು ಉತ್ಪನ್ನಗಳು ಕೈಗೆಟುಕದಂತೆ ಮಾಡಲು ತೆರಿಗೆ ಹೆಚ್ಚಳ ಅನಿವಾರ್ಯವಾಗಿದೆ. 2017ರಲ್ಲಿ ಜಿಎಸ್ ಟಿ ಜಾರಿಯಾದಾಗಿನಿಂದ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿಲ್ಲ ಎಂಬುದನ್ನು ಸಂಸ್ಥೆಗಳು ಒತ್ತಿ ಹೇಳಿವೆ. ತಂಬಾಕು ಉತ್ಪನ್ನಗಳ ಮೇಲೆ ಕನಿಷ್ಠ 75% ತೆರಿಗೆ ಹೊರೆ (ಚಿಲ್ಲರೆ ಮಾರಾಟ ಬೆಲೆಯಲ್ಲಿ ತೆರಿಗೆಯ ಪಾಲು) ವಿಧಿಸಬೇಕು ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿಗೆ ಹೋಲಿಸಿದರೆ, ಪರಿಹಾರ ಸೆಸ್ ಅನ್ನು ಒಳಗೊಂಡೂ ಈಗಿರುವ ಜಿಎಸ್ ಟಿ ದರ ತೀರಾ ಕಡಿಮೆ. ಸಿಗರೇಟ್‌ಗಳ ಮೇಲಿರುವ ಪ್ರಸ್ತುತ ಒಟ್ಟು ತೆರಿಗೆ ಹೊರೆ ಕೇವಲ 53% ಆಗಿದ್ದು, ಬೀಡಿಗಳ ಮೇಲೆ 22% ಮತ್ತು ಹೊಗೆರಹಿತ ತಂಬಾಕಿನ ಮೇಲೆ 60% ತೆರಿಗೆ ಹೊರೆ ವಿಧಿಸಲಾಗಿದೆ.

“ಇತ್ತೀಚಿನ ವರ್ಷಗಳಲ್ಲಿ ತಂಬಾಕು ಉತ್ಪನ್ನಗಳು ಹೆಚ್ಚು ಕೈಗೆಟುಕುವಂತಾಗಿರುವುದರಿಂದ 2023-24ರ ಬಜೆಟ್‌ನಲ್ಲಿ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವಂತೆ ನಾವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ತಂಬಾಕು ಬಳಕೆಯನ್ನು ನಿಯಂತ್ರಿಸುವಲ್ಲಿ ತೆರಿಗೆ ಹೆಚ್ಚಳ ಅತ್ಯಂತ ಪರಿಣಾಮಕಾರಿ ವಿಧಾನವಾಗಿದ್ದರೂ  ಅದನ್ನು ಸೂಕ್ತವಾಗಿ ಬಳಸಲಾಗುತ್ತಿಲ್ಲ. ತೆರಿಗೆಯನ್ನು ಮೂರು ಪಟ್ಟು ಹೆಚ್ಚಿಸಿದಾಗ ಆದಾಯವನ್ನು ದ್ವಿಗುಣಗೊಳಿಸಬಹುದು ಮಾತ್ರವಲ್ಲ ತಂಬಾಕು ಬಳಕೆಯನ್ನು ಅರ್ಧದಷ್ಟು ಕಡಿಮೆ ಮಾಡಬಹುದು. ತಂಬಾಕು ಉತನ್ನಗಳು ಕೈಗೆಟುಕದಂತೆ ಮಾಡಲು ಮತ್ತು ಅದರ ಬಳಕೆಯನ್ನು ತಗ್ಗಿಸಲು ತಂಬಾಕಿನ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ಇದು ಸಕಾಲವಾಗಿದೆ,” ಎಂದು ಪ್ರಸಿದ್ಧ ಕ್ಯಾನ್ಸರ್ ತಜ್ಞ ಮತ್ತು ಕರ್ನಾಟಕ ಸರ್ಕಾರದ ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ ಸದಸ್ಯರಾದ ಡಾ. ವಿಶಾಲ್ ರಾವ್ ಹೇಳಿದರು.

"ಜಿಎಸ್ ಟಿ ಜಾರಿಯ ನಂತರ ತಂಬಾಕು ತೆರಿಗೆಯಲ್ಲಿ ಯಾವುದೇ ಗಮನಾರ್ಹ ಏರಿಕೆ ಕಂಡುಬಂದಿಲ್ಲ. 2022-23ರ ಬಜೆಟ್‌ನಲ್ಲಿ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿ, ಅದರಿಂದ ಬಂದ ಹೆಚ್ಚುವರಿ ಆದಾಯವನ್ನು ಸಾರ್ವಜನಿಕ ಆರೋಗ್ಯ ವೃದ್ಧಿ ಮತ್ತು ತಂಬಾಕಿನ ಮೇಲೆ ಅವಲಂಬಿತರಾಗಿರುವ ಜನರಿಗೆ ಪರ್ಯಾಯ ಜೀವನೋಪಾಯ ನಿರ್ಮಿಸಲು ಬಳಸಬಹುದಾಗಿತ್ತು. ಯುವಜನರು ಮತ್ತು ದುರ್ಬಲರನ್ನು ತಂಬಾಕಿನಿಂದ ದೂರವಿರಿಸಲು ತಂಬಾಕಿನ ಮೇಲಿನ ತೆರಿಗೆ ಹೆಚ್ಚಳವು ತುಂಬಾ ಅಗತ್ಯವಾಗಿದೆ. ಆದ್ದರಿಂದ ತಂಬಾಕು ತೆರಿಗೆಯನ್ನು ಹೆಚ್ಚಿಸುವಂತೆ ನಾವು ಸರ್ಕಾರವನ್ನು ಕೋರುತ್ತೇವೆ,” ಎಂದು ಖ್ಯಾತ ಅರ್ಥಶಾಸ್ತçಜ್ಞ ಮತ್ತು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ. ಆರ್. ಎಸ್. ದೇಶಪಾಂಡೆ ತಿಳಿಸಿದರು.

“ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಸಂಸದೀಯ ಸ್ಥಾಯಿ ಸಮಿತಿಯ ‘ಕ್ಯಾನ್ಸರ್ ಆರೈಕೆಯ ಯೋಜನೆ ಮತ್ತು ನಿರ್ವಹಣೆ: ತಡೆಗಟ್ಟುವಿಕೆ, ರೋಗನಿರ್ಣಯ, ಸಂಶೋಧನೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ಕೈಗೆಟುಕುವಿಕೆ’ ಎಂಬ ಇತ್ತೀಚಿನ ವರದಿ, ಕ್ಯಾನ್ಸರ್‌ಗೆ ತಂಬಾಕು ಪ್ರಮುಖ ಅಪಾಯಕಾರಿ ಅಂಶವಾಗಿದೆ ಎಂದು ಅಭಿಪ್ರಾಯಪಟ್ಟಿದೆ ಮತ್ತು ಭಾರತದಲ್ಲಿನ ಎಲ್ಲಾ ಕ್ಯಾನ್ಸರ್‌ಗಳ ಪೈಕಿ ಶೇಕಡ 50 ರಷ್ಟಕ್ಕೆ ತಂಬಾಕು ಕಾರಣ ಎಂದು ಹೇಳಿದೆ. ತರ್ಕಬದ್ಧ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಇನ್ನೂ ಪಕ್ಕಾಗದ ಹದಿಹರೆಯದಲ್ಲಿ ತಂಬಾಕು ಬಳಕೆಯನ್ನು ಪ್ರಾರಂಭಿಸಲಾಗುತ್ತದೆ ಎಂಬ ಅಂಶವನ್ನು ಸಮಿತಿಯು ಮನಗಂಡಿದ್ದು, ತಂಬಾಕು ಸೇವನೆಯ ಉತ್ಸಾಹಭಂಗಗೊಳಿಸಬೇಕು ಎಂದು ಒತ್ತಿ ಹೇಳಿದೆ. ಅಲ್ಲದೆ, ತಂಬಾಕು ಉತ್ಪನ್ನಗಳ ಬೆಲೆ ಭಾರತದಲ್ಲೇ ಅತೀ ಕಡಿಮೆಯಾಗಿದ್ದು, ಎಲ್ಲ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲು ವರದಿ ಶಿಫಾರಸು ಮಾಡಿದೆ. ಏಕೆಂದರೆ, ತೆರಿಗೆ ಹೆಚ್ಚಳ ಕೇವಲ ತಂಬಾಕು ಬಳಕೆಯ ಸುಲಭ ಪ್ರಾರಂಭವನ್ನು ತಡೆಯುವುದು ಮಾತ್ರವಲ್ಲ, ತೆರಿಗೆಯಾಗಿ ಉತ್ಪತ್ತಿಯಾಗುವ ಹೆಚ್ಚುವರಿ ಆದಾಯವನ್ನು ಕ್ಯಾನ್ಸರ್ ತಡೆಗಟ್ಟುವ ಕಾರ್ಯಕ್ರಮಗಳಿಗೆ ಬಳಸಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ,” ಎಂದು ತಂಬಾಕು ಮುಕ್ತ ಕರ್ನಾಟಕ ವೇದಿಕೆಯ ಸಂಚಾಲಕರಾದ ಎಸ್ ಜೆ ಚಂದರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com