ಸಾರಿಗೆ ಇಲಾಖೆಯ 30 ಸಾವಿರ ಬಸ್ ಗಳನ್ನು ವಿದ್ಯುತ್ ಚಾಲಿತ ಬಸ್ ಗಳನ್ನಾಗಿ ಪರಿವರ್ತನೆ: ಸಚಿವ ಶ್ರೀರಾಮುಲು

ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯ 30 ಸಾವಿರ ಬಸ್ ಗಳನ್ನು ವಿದ್ಯುತ್ ಚಾಲಿತ ಬಸ್ ಗಳನ್ನಾಗಿ ಪರಿವರ್ತನೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಘೋಷಣೆ ಮಾಡಿದ್ದಾರೆ.
ಸಚಿವ ಶ್ರೀರಾಮುಲು
ಸಚಿವ ಶ್ರೀರಾಮುಲು

ಹಿರಿಯೂರು: ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯ 30 ಸಾವಿರ ಬಸ್ ಗಳನ್ನು ವಿದ್ಯುತ್ ಚಾಲಿತ ಬಸ್ ಗಳನ್ನಾಗಿ ಪರಿವರ್ತನೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಘೋಷಣೆ ಮಾಡಿದ್ದಾರೆ.

ಹಿರಿಯೂರಿನ ಹುಳಿಯಾರು ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ಬಸ್ ಘಟಕದ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಚಿವ ಶ್ರೀರಾಮುಲು, ‘ಪರಿಸರ ಮಾಲಿನ್ಯ ತಡೆಗಟ್ಟುವುದಕ್ಕಾಗಿ ಹಾಗೂ ಅಪಘಾತಗಳ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ 2030ರೊಳಗೆ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ 30,000 ಹಳೆಯ ಬಸ್‌ಗಳನ್ನು ವಿದ್ಯುತ್ ಚಾಲಿತ ಬಸ್‌ಗಳನ್ನಾಗಿ ಪರಿವರ್ತಿಸಲಾಗುವುದು’ ಎಂದು ಹೇಳಿದರು.

‘ಜನವರಿ ಅಂತ್ಯದೊಳಗೆ 50 ವಿದ್ಯುತ್ ಚಾಲಿತ ಬಸ್ ಖರೀದಿಸಲಾಗುವುದು. ಅಂತೆಯೇ 600 ಕೆಂಪು ಬಸ್ ಖರೀದಿಗೆ ಟೆಂಡರ್ ಕರೆಯಲಾಗಿದೆ. 60 ವೊಲ್ವೊ ಬಸ್ ಖರೀದಿಗೂ ಚಿಂತನೆ ನಡೆಸಿದ್ದೇವೆ. ರಸ್ತೆ ಅವ್ಯವಸ್ಥೆ ಕಾರಣಕ್ಕೆ ಅಪಘಾತ ಸಂಭವಿಸಿದಾಗ ಉಂಟಾಗುವ ಸಾವು–ನೋವು ತಪ್ಪಿಸಲು ಅಪಘಾತ ಸ್ಥಳಗಳನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸ ಲಾಗುವುದು. ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಯ ವೇತನ 2017ರಿಂದ ಪರಿಷ್ಕರಣೆ ಆಗಿಲ್ಲ. ಸಿಎಂ ಜೊತೆ ಮಾತನಾಡಿ ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಭಾರತ್ ಜೋಡೋ ಯಾತ್ರೆಯಿಂದ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಭಾರತ್ ಜೋಡೋ ಬದಲು ಸಿದ್ದರಾಮಯ್ಯ–ಡಿ.ಕೆ. ಶಿವಕುಮಾರ್ ಅವರನ್ನು ಒಂದುಗೂಡಿಸಲಿ ಎಂದು ವ್ಯಂಗ್ಯವಾಡಿದರು. ಅಂತೆಯೇ ಹಿರಿಯೂರು ತಾಲ್ಲೂಕಿಗೆ ಪ್ರಸ್ತುತ 11 ವಾಲ್ಮೀಕಿ ಭವನ ಮಂಜೂರು ಮಾಡಿದ್ದು, 30 ಭವನ ಬೇಕೆಂದು ಪೂರ್ಣಿಮಾ ಅವರು ಕೇಳಿದ್ದಾರೆ. ಭರವಸೆ ಈಡೇರಿಸುತ್ತೇನೆ’ ಎಂದು ಅವರು ಹೇಳಿದರು.

ಸಾರಿಗೆ ನಿಗಮದ ನಿರ್ದೇಶಕರಾದ ಪಿ. ರುದ್ರೇಶ್, ಆರುಂಡಿ ನಾಗರಾಜ್, ರಾಜುವಿಠಲಸ ಜರತಾರಘರ, ಮಾರುತಿ ಪ್ರಸಾದ್, ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಕೃಷಿಕ ಸಮಾಜದ ಅಧ್ಯಕ್ಷ ತಿಮ್ಮಯ್ಯ, ನಗರಸಭೆ ಸದಸ್ಯರಾದ ಶಿವರಂಜನಿ, ಎಂ.ಡಿ. ಸಣ್ಣಪ್ಪ, ಪಲ್ಲವ, ಅಂಬಿಕಾ, ಮಂಜುಳಾ, ಎ.ರಾಘವೇಂದ್ರ, ಕೇಶವಮೂರ್ತಿ, ಎಂ.ವಿ. ಹರ್ಷ, ಮಲ್ಲೇಶ್, ದೇವೀರಮ್ಮ, ಮುಖಂಡರಾದ ವಿ. ವಿಶ್ವನಾಥ್, ದ್ಯಾಮಣ್ಣ, ರಾಜೇಶ್ವರಿ ಇದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com