ಪ್ರತಿಭಟಿಸುವುದು ಹೇಗೆ ಎಂಬುದನ್ನು ದಲಿತರು ಮರೆತಿದ್ದಾರೆ: ಅಂಬೇಡ್ಕರ್ ಮೊಮ್ಮಗಳು
ಸಂವಿಧಾನ ಶಿಲ್ಪಿ, ದಲಿತ ವರ್ಗದ ಉದ್ಧಾರಕ ಡಾ.ಬಿ.ಆರ್. ಅಂಬೇಡ್ಕರ್ ಅವರ 66ನೇ ಪರಿನಿರ್ವಾಣ ದಿನದ ಅಂಗವಾಗಿ ಮಂಗಳವಾರ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ‘ಸಾಂಸ್ಕೃತಿಕ ಪ್ರತಿರೋಧ ಸಮಾವೇಶ’ದಲ್ಲಿ ಅಂದಾಜು 50,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು...
Published: 07th December 2022 08:53 AM | Last Updated: 07th December 2022 05:38 PM | A+A A-

ಮಂಗಳವಾರ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರಮಾಬಾಯಿ ಆನಂದ್ ತೇಲ್ತುಂಬ್ಡೆ ಮತ್ತಿತರರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಪುಷ್ಪನಮನ ಸಲ್ಲಿಸಿದರು.
ಬೆಂಗಳೂರು: ಸಂವಿಧಾನ ಶಿಲ್ಪಿ, ದಲಿತ ವರ್ಗದ ಉದ್ಧಾರಕ ಡಾ.ಬಿ.ಆರ್. ಅಂಬೇಡ್ಕರ್ ಅವರ 66ನೇ ಪರಿನಿರ್ವಾಣ ದಿನದ ಅಂಗವಾಗಿ ಮಂಗಳವಾರ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ‘ಸಾಂಸ್ಕೃತಿಕ ಪ್ರತಿರೋಧ ಸಮಾವೇಶ’ದಲ್ಲಿ ಅಂದಾಜು 50,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಾಯಕರು ಸರ್ಕಾರದ ದಮನಕಾರಿ ನೀತಿಗಳು, ಕರ್ನಾಟಕದಲ್ಲಿ ಮತ್ತು ಇಡೀ ದೇಶದಲ್ಲಿ ಹೆಚ್ಚುತ್ತಿರುವ ಜಾತಿ ಆಧಾರಿತ ದೌರ್ಜನ್ಯಗಳನ್ನು ಖಂಡಿಸಿದರು.
ಸಮಾವೇಶವನ್ನುದ್ದೇಶಿಸಿ ಮಾತನಾಡಿ ಅಂಬೇಡ್ಕರ್ ಅವರ ಮೊಮ್ಮಗಳು ರಮಾಬಾಯಿ ಆನಂದ ತೇಲ್ತುಂಬ್ಡೆ ಅವರು, ಪ್ರತಿಭಟಿಸುವುದು ಹೇಗೆ ಎಂಬುದನ್ನು ದಲಿತರು ಮರೆತಿದ್ದಾರೆ. ದೇಶದ ಜ್ವಲಂತ ಸಮಸ್ಯೆಗಳಿಗೆ ದಲಿತರು ಮೂಕಪ್ರೇಕ್ಷಕರಂತೆ ಇರಬಾರದು. ಅಪಾಯದಲ್ಲಿರುವ ಭಾರತದ ಸಂವಿಧಾನವನ್ನು ರಕ್ಷಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಡಾ. ಬಿ.ಆರ್.ಅಂಬೇಡ್ಕರ್ ಪುಣ್ಯಸ್ಮರಣೆ: ರಾಷ್ಟ್ರಪತಿ, ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಸೇರಿದಂತೆ ಗಣ್ಯರಿಂದ ಗೌರವ ನಮನ
ಅನ್ಯಾಯದ ವಿರುದ್ಧ ಆಂದೋಲನ ನಡೆಸುವಂತೆ ಅಂಬೇಡ್ಕರ್ ಸಂದೇಶ ನೀಡಿದ್ದರು, ಆದರೆ ದಲಿತರು ಈ ದಿನಗಳಲ್ಲಿ ಹೇಗೆ ಪ್ರತಿಭಟಿಸಬೇಕು ಎಂಬುದನ್ನು ಮರೆತಿದ್ದಾರೆ. ಕಳೆದ 7 ರಿಂದ 8 ವರ್ಷಗಳಿಂದ ನಮ್ಮ ಉದ್ಯೋಗ ಮತ್ತು ಶಿಕ್ಷಣದ ಹಕ್ಕನ್ನು ಹಿಂಪಡೆಯಲಾಗಿದೆ. ಮೆಟ್ರಿಕ್ ಪೂರ್ವ ಹಂತದಲ್ಲಿ ಓದುತ್ತಿರುವ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ನಿಲ್ಲಿಸಲಾಗಿದೆ. ನಾವು ಈ ವಿಷಯಗಳನ್ನು ಪತ್ರಿಕೆಗಳಲ್ಲಿ ಓದುತ್ತಿದ್ದರೂ, ಮೌನವಾಗಿರುತ್ತೇವೆ. ಅದಾಗಬಾರದು. ದಲಿತರು ಮೊದಲು ಅಂಬೇಡ್ಕರ್ ಅವರ ಕೃತಿಗಳನ್ನು ಓದಬೇಕೆಂದು ಕರೆ ನೀಡಿದರು.
ಆನಂದ್ ತೇಲ್ತುಮ್ಡೆ ಜೈಲಿನಲ್ಲಿದ್ದಾಗ ನನಗೆ ನೀವು ನೀಡಿದ್ದ ನೈತಿಕ ಬೆಂಬಲಕ್ಕಾಗಿ ನಾನು ನಿಮ್ಮೆಲ್ಲರಿಗೂ ಆಭಾರಿಯಾಗಿದ್ದೇನೆ. ನೀವೆಲ್ಲರೂ, ವಿಶೇಷವಾಗಿ ಮಹಿಳೆಯರು, ನಿಮ್ಮ ಆರಾಮ ವಲಯಗಳಿಂದ ಹೊರಬಂದು ಸರ್ಕಾರದ ವಿರುದ್ಧ ಹೋರಾಡಬೇಕೆಂದು ನಾನು ಬಯಸುತ್ತೇನೆ. ನಾವು ಹೋರಾಟ ಮಾಡುವವರೆಗೂ ಅಧಿಕಾರದಲ್ಲಿ ನಮ್ಮ ಪಾಲು ಸಿಗುವುದಿಲ್ಲ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ (ಡಿಎಸ್‌ಎಸ್) ವಿವಿಧ ಬಣಗಳು ಒಗ್ಗೂಡಿ ಕಾರ್ಯಕ್ರಮವನ್ನು ಆಯೋಜಿಸಿ 15 ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಇದನ್ನೂ ಓದಿ: ದಾರ್ಶನಿಕ ಅರ್ಥಶಾಸ್ತ್ರಜ್ಞ ಅಂಬೇಡ್ಕರ್ ಅವರ ಆರ್ಥಿಕ ನೀತಿಗಳು (ಹಣಕ್ಲಾಸು)
ಆರ್ಥಿಕವಾಗಿ ದುರ್ಬಲ ವಿಭಾಗ (EWS), ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಡಿಯಲ್ಲಿ ಶೇ.10ರಷ್ಟು ಮೀಸಲಾತಿಗೆ ವಿರೋಧ, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕಡಿಮೆ ಶಿಕ್ಷೆ ಪ್ರಮಾಣದ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದಲಿತ ನಾಯಕರು, ಗೋಹತ್ಯೆ ಮತ್ತು ಮತಾಂತರ ವಿರೋಧಿ ಕಾನೂನುಗಳು ಅವೈಜ್ಞಾನಿಕವಾಗಿದ್ದು, ಅವುಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯ ಅತಿಥಿಗಳಾಗಿ ಬರಬೇಕಿದ್ದ ಲೇಖಕ ದೇವನೂರು ಮಹಾದೇವ ಅವರು ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಹಾಜರಿರಲಿಲ್ಲ. ಅವರ ಆರೋಗ್ಯ ಸರಿಯಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.