ಕಲುಷಿತಗೊಂಡಿದ್ದ ನಾಗನಾಯಕನಹಳ್ಳಿ ಕೆರೆಗೆ ಮರುಜೀವ ನೀಡಿದ ಕೆರೆ ರಕ್ಷಣಾ ಕಾರ್ಯಕರ್ತೆ ರೇವತಿ ಕಾಮತ್!
ನಿರ್ವಹಣೆ ಇಲ್ಲದೆ, ಕಲುಷಿತಗೊಂಡು ದುರ್ವಾಸನೆ ಹೊಡೆಯುತ್ತಿದ್ದ ನಾಗನಾಯಕನಹಳ್ಳಿ ಕೆರೆಗೆ ಕೆರೆ ರಕ್ಷಣಾ ಕಾರ್ಯಕರ್ತೆ ರೇವತಿ ಕಾಮತ್ ಅವರು ಮರುಜೀವ ನೀಡಿದ್ದಾರೆ.
Published: 07th December 2022 09:37 AM | Last Updated: 09th December 2022 12:50 PM | A+A A-

ರೇವತಿ ಕಾಮತ್ (ಒಳಚಿತ್ರ): ನಾಗನಾಯಕನಹಳ್ಳಿ ಕೆರೆಯಲ್ಲಿ ಹೂಳು ತೆಗೆಯುವ ಕಾಮಗಾರಿ ಪ್ರಗತಿಯಲ್ಲಿದೆ.
ಬೆಂಗಳೂರು: ನಿರ್ವಹಣೆ ಇಲ್ಲದೆ, ಕಲುಷಿತಗೊಂಡು ದುರ್ವಾಸನೆ ಹೊಡೆಯುತ್ತಿದ್ದ ಬೆಂಗಳೂರು ಹೊರವಲಯದಲ್ಲಿರುವ ನಾಗನಾಯಕನಹಳ್ಳಿ ಕೆರೆಗೆ ಕೆರೆ ರಕ್ಷಣಾ ಕಾರ್ಯಕರ್ತೆ ರೇವತಿ ಕಾಮತ್ ಅವರು ಮರುಜೀವ ನೀಡಿದ್ದಾರೆ.
ಕಲುಷಿತಗೊಂಡಿರುವ ಕೆರೆಯಿಂದಾಗಿ ಕನಕಪುರ ರಸ್ತೆಯ ನೇಗುಳಿ ಪಂಚಾಯಿತಿಯ ಗ್ರಾಮಸ್ಥರು ಪಡುತ್ತಿದ್ದ ದುಸ್ಥಿತಿಗೆ ಮರುಗಿದ ಕೆರೆ ಸಂರಕ್ಷಣೆ ಕಾರ್ಯಕರ್ತೆ ರೇವತಿ, ಕೆರೆ ಒತ್ತುವರಿ ತೆರವಿಗಾಗಿ ಶ್ರಮಿಸಿದರು. ಅಲ್ಲದೆ, ದುರ್ವಾಸನೆ ಹೊಡೆಯುತ್ತಿದ್ದ ಕೆರೆ ಮರುಜೀವ ನೀಡುವ ಕೆಲಸವನ್ನು ಮಾಡಿದ್ದಾರೆ.
ಈಗಾಗಲೇ ಕಾಮತ್ ಅವರು ಕೆರೆಯಲ್ಲಿದ್ದ ಹೂಳು ತೆಗೆಯುವ ಕೆಲಸವನ್ನು ಮಾಡಿದ್ದು, ಶೀಘ್ರವೇ ಕಾಯಕಲ್ಪ ಕಾರ್ಯವನ್ನೂ ಆರಂಭಿಸಲಿದ್ದಾರೆ. ಆದರೆ, 7 ಎಕರೆ ವಿಸ್ತೀರ್ಣದ ಕೆರೆಗೆ ಅಡ್ಡಲಾಗಿ ಹೈಟೆನ್ಷನ್ ಕೇಬಲ್‌ಗಳನ್ನು ಹಾಕಲಾಗಿದ್ದು, ಅವುಗಳನ್ನು ತೆರವುಗೊಳಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಅಧಿಕಾರಿಗಳಿಂದ ಸಹಕಾರ ಸಿಗುತ್ತಿಲ್ಲ. ತಮ್ಮ ಬಳಿ ಹಣವಿಲ್ಲ ಎಂದು ಹೇಳುತ್ತಿದ್ದಾರೆಂದು ರೇವತಿಯವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಂದಾಪುರ ಕೆರೆ ರಕ್ಷಿಸಲು ವಿಫಲ: 500 ಕೋಟಿ ರೂ. ದಂಡ ಆದೇಶ ಮಾರ್ಪಾಡು ಕೋರಿದ್ದ ಸರ್ಕಾರದ ಮನವಿ ವಜಾಗೊಳಿಸಿದ ಎನ್‌ಜಿಟಿ
''ಕಳೆದ ಆರು ವರ್ಷಗಳಿಂದ ಕೆರೆ ಅಭಿವೃದ್ಧಿಯಲ್ಲಿ ತೊಡಗಿದ್ದೇನೆ. ಇತ್ತೀಚೆಗೆ ನಾಗನಾಯಕನಹಳ್ಳಿ ಕೆರೆಯಿಂದ ದುರ್ವಾಸನೆ ಬರುತ್ತಿದೆ ಎಂದು ಗ್ರಾಮಸ್ಥರು ದೂರಿದ್ದರು. ಬಳಿಕ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಸಮಸ್ಯೆ ಪರಿಹರಿಸಲೂ ನಿರ್ಧರಿಸಿದೆ. ಇದ್ದ ಸಂಪನ್ಮೂಲಗಳನ್ನು ಬಳಸಿಕೊಂಡು ಕೆಲವರೊಂದಿಗೆ ಎರಡು ಎಕರೆ ಜೌಗು ಪ್ರದೇಶದಿಂದ ಹೂಳು ತೆಗೆಸಿದೆ. ಇನ್ನು ಕೆಲವು ದಿನಗಳಲ್ಲಿ ಒಂದು ಮೂಲೆಯಲ್ಲಿ ಸುರಿದಿರುವ ಕಲುಷಿತ ಹೂಳು ತೆಗೆದು ಕಾಯಕಲ್ಪ ಕಾರ್ಯವನ್ನು ಆರಂಭಿಸಲಾಗುವುದು ಎಂದು ರೇವತಿಯವರು ಹೇಳಿದ್ದಾರೆ.
ಕನಕಪುರದ ಸುತ್ತಮುತ್ತಲಿನ ಗ್ರಾಮಸ್ಥರು ರಾಜಕಾಲುವೆಗಳ ಮೂಲಕ ಸಂಸ್ಕರಿಸದ ಕೊಳಚೆಯನ್ನು ಜಲಮೂಲಕ್ಕೆ ಬಿಡುತ್ತಿದ್ದಾರೆ, ಇದು ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಗ್ರಾಮಸ್ಥರಿಂದ ಬೆಂಬಲ ಸಿಗುತ್ತಿದ್ದರೂ ಅಧಿಕಾರಿಗಳು ಕೆರೆಯ ಮಧ್ಯದಲ್ಲಿ ಹಾದು ಹೋಗಿರುವ 11ಕೆವಿ ಕೇಬಲ್‌ಗಳನ್ನು ಸ್ಥಳಾಂತರಿಸಲು ಸಂಬಂಧಿಸಿದ ಕಡತಗಳನ್ನು ಕ್ಲಿಯರ್ ಮಾಡಲು ವಿಳಂಬ ಮಾಡುತ್ತಿದ್ದಾರೆ. “ಕೆರೆಯ ಬಳಿ ಹೋಗುವ ಹಸುಗಳು ಮತ್ತು ಮನುಷ್ಯರಿಗೆ ಈ ಕೇಬಲ್ ಗಳಿಂದ ಹಾನಿಯಾಗಬಹುದು ಎಂಬ ಕಾರಣದಿಂದ ಗ್ರಾಮಸ್ಥರು ವಿದ್ಯುತ್ ಕೇಬಲ್‌ಗಳನ್ನು ಬೇರೆಡೆಗೆ ಹಾಕುವಂತೆ ಬೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಆದರೆ ಅದಕ್ಕೆ ಬೇಕಾದ 4 ಲಕ್ಷ ರೂಪಾಯಿ ತಮ್ಮ ಬಳಿ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆಂದು ರೇವತಿಯವರು ಕಿಡಿಕಾರಿದ್ದಾರೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಕಗ್ಗಲಿಪುರ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಹೇಶ್ ಅವರು, ಬಜೆಟ್ ಕೊರತೆಯಿದ್ದು, ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.