ವಕೀಲರ ಸುಲಿಗೆ: ರೌಡಿ, ಪುತ್ರ ಬಂಧನ

ವಕೀಲರೊಬ್ಬರನ್ನು ಸುಲಿಗೆ ಮಾಡಿದ ಹಿನ್ನೆಲೆಯಲ್ಲಿ ಕುಖ್ಯಾತ ರೌಡಿ ಹಾಗೂ ಆತನ ಪುತ್ರನನ್ನು ಡಿಜೆಹಳ್ಳಿ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಕೀಲರೊಬ್ಬರನ್ನು ಸುಲಿಗೆ ಮಾಡಿದ ಹಿನ್ನೆಲೆಯಲ್ಲಿ ಕುಖ್ಯಾತ ರೌಡಿ ಹಾಗೂ ಆತನ ಪುತ್ರನನ್ನು ಡಿಜೆಹಳ್ಳಿ ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಆರೋಪಿಯನ್ನು ಮಂಜೂರ್ ಅಹ್ಮದ್ ಅಲಿಯಾಸ್ ಧೂನ್ (38) ಹಾಗೂ ಈತನ ಪುತ್ರನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ರೌಡಿ ಪುತ್ರ ಅಪ್ರಾಪ್ತ ಬಾಲಕನಾಗಿದ್ದು, ಈತನ ವಿರುದ್ಧ ಪೊಲೀಸರು ಬಾಲಾಪರಾಧ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಿಂಗರಾಜಪುರಂನ ಜೋಸೆಫ್ ರೆಡ್ಡಿ ಲೇಔಟ್‌ನ ನಿವಾಸಿ ಅಶ್ಫಾಕ್ ಅಹ್ಮದ್ ಎಂಬ ವಕೀಲರು ಭಾನುವಾರ ಸಂಜೆ 12.30 ರ ಸುಮಾರಿಗೆ ಕಾರಿನಲ್ಲಿ ತಮ್ಮ ಕುಟುಂಬದೊಂದಿಗೆ ಮನೆಗೆ ಮರಳುತ್ತಿದ್ದಾಗ ನಾಲ್ವರ ತಂಡವು ಅವರ ವಾಹನವನ್ನು ಅಡ್ಡಗಟ್ಟಿದಿದೆ. ಅಶ್ಫಾಕ್ ನನ್ನು ಕಾರಿನಿಂದ ಹೊರಕ್ಕೆ ಎಳೆದೊಯ್ದ ತಂಡ, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಕಾರಿನಲ್ಲಿ ಪರಾರಿಯಾಗುವ ಮೊದಲು ವಕೀಲರ ಪರ್ಸ್ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ದೋಚಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ಬೆಳಗಿನ ಜಾವ 2 ಗಂಟೆಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. 30 ನಿಮಿಷಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಕಾರನ್ನು ವಶಪಡಿಸಿಕೊಳ್ಳಲಾಯಿತು. ಬಂಧನದ ವೇಳೆ ತಂದೆ ಹಾಗೂ ಪುತ್ರ ಇಬ್ಬರೂ ಒಟ್ಟಿಗೆ ಇದ್ದರು, ವಿಚಾರಣೆ ವೇಳೆ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆಂದು ತಿಳಿಸಿದ್ದಾರೆ.

2006 ರಿಂದ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಧೂನ್ ಹೆಸರು ರೌಡಿ ಶೀಟರ್ ಪಟ್ಟಿಯಲ್ಲಿದೆ. ಈತ ಕೊಲೆ, ದರೋಡೆ ಮತ್ತು ಸುಲಿಗೆ ಸೇರಿದಂತೆ ಸುಮಾರು 25 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ತಾನು ರಾಜಕಾರಣಿಯೊಬ್ಬರ ಸಂಬಂಧಿ ಎಂದು ಹೇಳಿ ಸುಲಿಗೆ ಮಾಡುತ್ತಿದ್ದಾನೆ ಎನ್ನಲಾಗಿದ್ದು, ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

“ಧೂನ್ ಈ ಹಿಂದೆ ವಕೀಲರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡಿರುವುದು ಕಂಡುಬಂದಿದೆ. ಕೆಲವು ವರ್ಷಗಳ ಹಿಂದೆ, ಮಾಜಿ ರೈಲ್ವೇ ಸಚಿವ ದಿವಂಗತ ಜಾಫರ್ ಷರೀಫ್‌ಗೆ ಬೆದರಿಕೆ ಹಾಕಿದ್ದ ಆರೋಪದಡಿಯೂ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com