ನಿಮ್ಹಾನ್ಸ್'ನಲ್ಲಿ ಹಾಸಿಗೆಗಳ ಕೊರತೆ: ಚಿಕಿತ್ಸೆ ಪಡೆದುಕೊಳ್ಳಲು ರೋಗಿಗಳ ಪರದಾಟ!

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್)ನಲ್ಲಿ ಹಾಸಿಗೆಗಳ ಕೊರತೆಯುಂಟಾಗಿದ್ದು, ಇದರ ಪರಿಣಾಮ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳಲಾಗದೆ ರೋಗಿಗಳು ಪರದಾಡುವಂತಹ ಸ್ಥಿತಿ ಎದುರಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್)ನಲ್ಲಿ ಹಾಸಿಗೆಗಳ ಕೊರತೆಯುಂಟಾಗಿದ್ದು, ಇದರ ಪರಿಣಾಮ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳಲಾಗದೆ ರೋಗಿಗಳು ಪರದಾಡುವಂತಹ ಸ್ಥಿತಿ ಎದುರಾಗಿದೆ.

ಹಾಸಿಗೆ ಕೊರತೆಗಳಿರುವ ಕಾರಳಣ ಕಳೆದ ಕೆಲವು ವಾರಗಳಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ನಿಮ್ಹಾನ್ಸ್ ನಿರಾಕರಿಸುತ್ತಿದ್ದು, ಬೇರೆ ಆಸ್ಪತ್ರೆಗಳಿಗೆ ದಾಖಲಿಸುವಂತೆ ತಿಳಿಸುತ್ತಿದೆ ಎಂದು ತಿಳಿದುಬಂದಿದೆ.

ಸ್ಟ್ರೋಕ್"ಗೆ ಒಳಗಾಗಿದ್ದ 15 ವರ್ಷದ ಬಾಲಕನನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್'ಗೆ ಶಿಫಾರಸ್ಸು ಮಾಡಿದ್ದರು. ಆದರೆ, ವೆಂಟಿಲೇಟರ್ ಬೆಡ್ ಕೊರತೆ ಕಾರಣ ನೀಡಿರುವ ನಿಮ್ಹಾನ್ಸ್ ವೈದ್ಯರು, ಬಾಲಕನಿಗೆ ಚಿಕಿತ್ಸೆ ನಿರಾಕರಿಸಿದ್ದಾರೆಂದು ತಿಳಿದುಬಂದಿದೆ.

ಮಂಡ್ಯದಿಂದ ಬೆಂಗಳೂರಿಗೆ ಆಂಬ್ಯುಲೆನ್ಸ್ ಶುಲ್ಕದ ಹೊರತಾಗಿಯೂ ಬಾಲಕನ ಕುಟುಂಬವು ಆಸ್ಪತ್ರೆಯಲ್ಲಿ ಆರಂಭದಲ್ಲಿ 30,000 ರೂ ಪ್ರವೇಶ ಶುಲ್ಕವನ್ನು ಪಾವತಿಸಿತ್ತು.

ಬಾಲಕನ ತಂದೆ ರೈತ ಸತೀಶ್ ಮಾತನಾಡಿ, ‘ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸೆ ಪಡೆಯಲು ನನ್ನಿಂದ ಸಾಧ್ಯವಿಲ್ಲ. ಈಗಾಗಲೇ ಎರಡು ದಿನಗಳಲ್ಲಿ 1.5 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ. ಇದೀಗ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ನಿರಾಕರಿಸಲಾಗಿದ್ದು, ನನ್ನ ಮಗನನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದೇವೆಂದು ಹೇಳಿದ್ದಾರೆ.

ಇದೊಂದೇ ಪ್ರಕರಣವಲ್ಲ. ಮತ್ತೊಂದು ಘಟನೆಯಲ್ಲಿ, ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದ ಮತ್ತು ತಕ್ಷಣದ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಹಿರಿಯ ನಾಗರಿಕರಿಗೂ ಇದೇ ಕಾರಣಕ್ಕಾಗಿ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ನಿರಾಕರಿಸಲಾಗಿದೆ.

“ತುರ್ತುನಿಗಾ ಘಟಕವು ಪ್ರತಿದಿನವೂ ರೋಗಿಗಳಿಂದ ತುಂಬಿರುತ್ತದೆ, ಹೀಗಾಗಿ ಹೊರ ರೋಗಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಇಲ್ಲಿ ಬರುವ ಎಲ್ಲಾ ಪ್ರಕರಣಗಳು ನಿರ್ಣಾಯಕವಾಗಿರುತ್ತವೆ.  ಇತರ ಆಸ್ಪತ್ರೆಗಳು ನಮ್ಮಲ್ಲಿರುವ ಪರಿಣತಿಯನ್ನು ಹೊಂದಿಲ್ಲದ ಕಾರಣ ತುರ್ತು ಚಿಕಿತ್ಸೆಗಾಗಿ ಹೆಚ್ಚಿನ ಜನರು ಇಲ್ಲಿಯೇ ಬರುತ್ತಾರೆ. ಆದರೆ, ನಮ್ಮಲ್ಲಿ ಮೂಲಸೌಕರ್ಯಗಳಿಲ್ಲ. ಆದ್ದರಿಂದ ನಮ್ಮ ಹೊರೆಯನ್ನು ಕಡಿಮೆ ಮಾಡಲು ಸರ್ಕಾರವು ದ್ವಿತೀಯ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ವೈದ್ಯರು ಹೇಳಿದ್ದಾರೆ.

ನಿಮ್ಹಾನ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರನ್ ಮಾತನಾಡಿ, “ಸಂಸ್ಥೆಯು ತೃತೀಯ ಆರೈಕೆ ಆಸ್ಪತ್ರೆಯಾಗಿದ್ದು, ಬರುವ ಪ್ರತಿಯೊಬ್ಬ ರೋಗಿಯನ್ನು ದಾಖಲಿಸಲು ಸಾಧ್ಯವಿಲ್ಲ. ವಿಶೇಷ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ನಾವು ಹೆಚ್ಚಿನ ಆದ್ಯತೆ ನೀಡುತ್ತೇವೆ. ಪ್ರಕರಣದ ತೀವ್ರತೆಯನ್ನು ಅವಲಂಬಿಸಿ, ಯಾವ ಪ್ರಕರಣಗಳಿಗೆ ಹೆಚ್ಚಿನ ನೆರವು ಬೇಕು ಎಂದು ನಾವು ನಿರ್ಧರಿಸುತ್ತೇವೆ. ಈ ಪ್ರಕ್ರಿಯೆಯಲ್ಲಿ ಕೆಲವು ರೋಗಿಗಳು ಹೊರಗುಳಿಯುತ್ತಾರೆಂದು ಹೇಳಿದ್ದಾರೆ.

ಆದಾಗ್ಯೂ, ಸಂಸ್ಥೆಯು ಪ್ರತಿ ರೋಗಿಗೆ ಸಮಾಲೋಚನೆಯನ್ನು ನೀಡುತ್ತದೆ ಮತ್ತು ಪ್ರಕರಣಗಳು ಹೆಚ್ಚು ಗಂಭೀರವಾಗಿಲ್ಲದಿದ್ದಾಗ ಇತರ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವಂತೆ ಶಿಫಾರಸು ಮಾಡುತ್ತದೆ ಎಂದು ಡಾ ಮುರಳೀಧರನ್ ತಿಳಿಸಿದ್ದಾರೆ.

ನಿಮ್ಹಾನ್ಸ್‌ನಲ್ಲಿ ದಿನನಿತ್ಯ ಹೆಚ್ಚಿನ ಸಂಖ್ಯೆ ರೋಗಿಗಳು ಬರುತ್ತಾರೆ. ಪ್ರಸ್ತುತ ಆಸ್ಪತ್ರೆಗೆ ಪ್ರತಿದಿನ ಸುಮಾರು 2,000 ಜನರು ಬರುತ್ತಾರೆ. ಆಸ್ಪತ್ರೆಯಲ್ಲಿ 44 ವೆಂಟಿಲೇಟರ್ ಹಾಸಿಗೆಗಳು ಸೇರಿದಂತೆ 1,096 ಹಾಸಿಗೆಗಳಿವೆ ಎಂದು ಮಾಹಿತಿ ನೀಡಿದರು.

ಹಾಸಿಗೆಗಳ ಕೊರತೆ ಕುರಿತು ಮಾತನಾಡಿ, ಮಾನವ ಸಂಪನ್ಮೂಲವನ್ನು ಹೆಚ್ಚಿಸಿದರೆ ಹಾಸಿಗೆಗಳ ಸಂಖ್ಯೆಯನ್ನೂ ಹೆಚ್ಚಿಸಬಹುದು. ಜನರಿಗೆ ಚಿಕಿತ್ಸೆ ನೀಡಲು ನಿಮ್ಹಾನ್ಸ್ ಸದಾ ಕಾಲ ಸುಸಜ್ಜಿತವಾಗಿದೆ. ಇಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗದೆ ಹಿಂತಿರುಗಿ ಬೇರೆ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯದಿದ್ದಾಗ ಸಮಸ್ಯೆ ಹೆಚ್ಚಾಗುತ್ತದೆ ಎಂದು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com