ಗರ್ಭಿಣಿಯರ ಮಧುಮೇಹ ಪರೀಕ್ಷೆಯಿಂದ ತಾಯಂದಿರ ಮರಣ ಪ್ರಮಾಣ ಕಡಿಮೆ ಮಾಡಬಹುದು: ಡಾ ರಾಜ್‌ಕುಮಾರ್ ಎನ್

ಕರ್ನಾಟಕದ ನಾಗರಿಕರಿಗೆ ಗುಣಮಟ್ಟದ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ರಾಜ್ಯ ಸರ್ಕಾರವು, ಇದೀಗ ಮಧುಮೇಹದತ್ತ ಗಮನಹರಿಸಿದ್ದು, ಮುಂಬರುವ ವರ್ಷದಲ್ಲಿ ಗರ್ಭಿಣಿಯರಿಗೆ ಮಧುಮೇಹ ಪರೀಕ್ಷೆ ನಡೆಸಲು ಚಿಂತನೆ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕದ ನಾಗರಿಕರಿಗೆ ಗುಣಮಟ್ಟದ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ರಾಜ್ಯ ಸರ್ಕಾರವು, ಇದೀಗ ಮಧುಮೇಹದತ್ತ ಗಮನಹರಿಸಿದ್ದು, ಮುಂಬರುವ ವರ್ಷದಲ್ಲಿ ಗರ್ಭಿಣಿಯರಿಗೆ ಮಧುಮೇಹ ಪರೀಕ್ಷೆ ನಡೆಸಲು ಚಿಂತನೆ ನಡೆಸಿದೆ.

ರಾಜ್ಯದಲ್ಲಿ ತಾಯಿ ಮತ್ತು ಶಿಶು ಮರಣ/ಅಸ್ವಸ್ಥತೆಯ ದರಗಳನ್ನು ಕಡಿಮೆ ಮಾಡುವುದು ಈ ಉಪಕ್ರಮದ ಗುರಿಯಾಗಿದೆ ಎಂದು ಕರ್ನಾಟಕ ಮಾತೃ ಆರೋಗ್ಯ ಉಪನಿರ್ದೇಶಕ ಡಾ ರಾಜ್‌ಕುಮಾರ್ ಎನ್ ಅವರು ಹೇಳಿದ್ದಾರೆ.

ಗರ್ಭಿಣಿಯರನ್ನು ಗುರುತಿಸಿ, ಅವರಿಗೆ ಮಧುಮೇಹ ಪರೀಕ್ಷೆ ನಡೆಸಲು ಚಿಂತನೆಗಳು ನಡೆದಿದೆ ಎಂದು ತಿಳಿಸಿದ್ದಾರೆ.

ಮಧುಮೇಹ ಮತ್ತು ರಕ್ತಹೀನತೆದಂತಹ ಅಂಶಗಳು ತಾಯಿಯ ಅನಾರೋಗ್ಯದ ಪ್ರಕರಣಗಳಿಗೆ ಕಾರಣವಾಗಿವೆ. ಹದಗೆಡುತ್ತಿರುವ ಜೀವನಶೈಲಿ ಅಭ್ಯಾಸಗಳು, ಕಳಪೆ ಆಹಾರ ಪದ್ಧತಿ ಮತ್ತು ಜನರಲ್ಲಿ ಕಡಿಮೆ ದೈಹಿಕ ಚಟುವಟಿಕೆಗಳು ಇದಕ್ಕೆ ಕಾರಣವಾಗಿದೆ ಎಂದು ವಿವರಿಸಿದರು.

ಶೇ.10 ರಷ್ಟು ಮಹಿಳೆಯರಿಗೆ ಗರ್ಭಾವಸ್ಥೆಯ ಮಧುಮೇಹ ಇರುವ ಸಾಧ್ಯತೆಯಿರುತ್ತದೆ. ಅವುಗಳನ್ನು ಗುರುತಿಸಿ ಚಿಕಿತ್ಸೆ ನೀಡಿದರೆ, ಗರ್ಭಿಣಿ ಮಹಿಳೆಯರಲ್ಲಿನ ಮರಣ ಪ್ರಮಾಣವನ್ನು ಮತ್ತಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಸ್ತ್ರೀರೋಗತಜ್ಞ ಡಾ.ಹರಿತಾ ರಾವ್ ಅವರು ಮಾತನಾಡಿ, ಮಧುಮೇಹವು ಮಹಿಳೆಯ ಗರ್ಭಾವಸ್ಥೆಯ ಮೇಲೆ ಹಲವಾರು ಪರಿಣಾಮಗಳನ್ನು ಬೀರುತ್ತದೆ ಎಂದು ವಿವರಿಸಿದರು.

ಐವಿಎಫ್ (ಇನ್ ವಿಟ್ರೊ ಫರ್ಟಿಲೈಸೇಶನ್) ಚಿಕಿತ್ಸೆಯ ಸಹಾಯದಿಂದ ಸಂಭವಿಸುವ ಗರ್ಭಾವಸ್ಥೆಯ ಸಂದರ್ಭಗಳಲ್ಲಿ, ಗರ್ಭಾವಸ್ಥೆಯ ಮಧುಮೇಹದ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದ್ದರಿಂದ, ಪ್ರತಿ ಗರ್ಭಿಣಿ ಮಹಿಳೆಯು ತನ್ನ ಗರ್ಭಾವಸ್ಥೆಯಲ್ಲಿ ಮಧುಮೇಹವನ್ನು ಪರೀಕ್ಷಿಸಿಕೊಳ್ಳಬೇಕು. ಒಂದು ವೇಳೆ ಮಧುಮೇಹ ಇರುವುದು ಕಂಡುಬಂದಲ್ಲಿ, ಅದನ್ನು ನಿಯಂತ್ರಣದಲ್ಲಿಡಲು ಸರಿಯಾದ ಆಹಾರ ಅಥವಾ ಔಷಧಿಗಳನ್ನು ನಿರ್ವಹಿಸುವ ಮೂಲಕ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಅನಿಯಂತ್ರಿತ ಮಧುಮೇಹವು ಮಹಿಳೆ ಮತ್ತು ಆಕೆಯ ಮಗುವಿನ ಆರೋಗ್ಯದ ಪರಿಣಾಮಗಳನ್ನು ಬೀರುತ್ತದೆ. ಗರ್ಭಾಶಯದಲ್ಲಿ ನೀರು ಹೆಚ್ಚಾಗಲು ಇದು ಕಾರಣವಾಗಬಹುದುಯ ಅವಧಿಪೂರ್ವ ಹೆರಿಗೆ, ಪೊರೆಗಳ ಛಿದ್ರ, ಅಕಾಲಿಕ ಹೆರಿಗೆಗೆ ಕಾರಣವಾಗಬಹುದು. ನವಜಾತ ಶಿಶುವಿಗೆ ತಾಯಿಯಿಂದ ಹೆಚ್ಚಿನ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹರಡಬಹುದು. ಹೀಗಾಗಿ ಗರ್ಭಾವಸ್ಥೆಯ ಮೊದಲು ಮತ್ತು ಗರ್ಭಾವಸ್ಥೆಯ ಸಮಯದಲ್ಲಿ ಸರಿಯಾದ ಆರೈಕೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಗರ್ಭಧಾರಣೆಯ ಪೂರ್ವ ಹಂತದಲ್ಲಿ ಪರೀಕ್ಷೆಗಳನ್ನು ಮಾಡಿಸಿಕೊಂಡರೆ, ಅನೇಕ ಸಮಸ್ಯೆಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com