2023 ಅಸೆಂಬ್ಲಿ ಚುನಾವಣೆ: ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಜೊತೆ ಬಿಜೆಪಿ ಜನರ ಬಳಿಗೆ- ಜೆ.ಪಿ. ನಡ್ಡಾ

 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಜೊತೆ ಬಿಜೆಪಿ ಜನರ ಮುಂದೆ ಹೋಗಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. 
ಕೊಪ್ಪಳದಲ್ಲಿ 10 ಜಿಲ್ಲಾ ಬಿಜೆಪಿ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೆಪಿ ನಡ್ಡಾ
ಕೊಪ್ಪಳದಲ್ಲಿ 10 ಜಿಲ್ಲಾ ಬಿಜೆಪಿ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೆಪಿ ನಡ್ಡಾ

ಕೊಪ್ಪಳ: 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಜೊತೆ ಬಿಜೆಪಿ ಜನರ ಮುಂದೆ ಹೋಗಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. 

ಕೊಪ್ಪಳದಲ್ಲಿಂದು ರಾಜ್ಯದ 10 ಜಿಲ್ಲೆಗಳ ನೂತನ ಕಾರ್ಯಾಲಯ ಭವನಗಳ ಉದ್ಘಾಟನೆ ಮತ್ತು 3 ಜಿಲ್ಲೆಗಳ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ, ಹಾಗೂ ಬೊಮ್ಮಾಯಿ ಅವರ ನೇತೃತ್ವದಲ್ಲಿ ದೇಶ- ರಾಜ್ಯದಲ್ಲಿ ಮಹಿಳಾ ಸಶಕ್ತೀಕರಣ ಕಾರ್ಯ ನಡೆದಿದ್ದು,  12 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಾಣವಾಗಿದೆ.  ಆಯುಷ್ಮಾನ್ ಭಾರತ್ ಮೂಲಕ 5 ಲಕ್ಷ ರೂಪಾಯಿಯ ಸ್ವಾಸ್ಥ್ಯ ರಕ್ಷಣೆ ಲಭಿಸಿದೆ. ಜಲ ಜೀವನ್ ಮಿಷನ್ ಅಡಿಯಲ್ಲಿ  ಮನೆ ಮನೆಗೆ ನೀರು ಲಭಿಸುತ್ತಿದೆ. ಉಜ್ವಲ ಯೋಜನೆಯಡಿ 9 ಕೋಟಿ ಸಿಲಿಂಡರ್ ಸಂಪರ್ಕ ಕೊಡಲಾಗಿದೆ ಎಂದು ತಿಳಿಸಿದರು.

ರೈತರ ಮಕ್ಕಳಿಗೆ ವಿದ್ಯಾನಿಧಿಯನ್ನು ಕರ್ನಾಟಕ ಸರಕಾರ ನೀಡಿದೆ. ನೂತನ ಶಿಕ್ಷಣ ನೀತಿಯನ್ನು ಜಾರಿ ಮಾಡಿದ ಮೊದಲ ರಾಜ್ಯ ಕರ್ನಾಟಕ. ಸಂಕಷ್ಟದಲ್ಲಿರುವ ಸಮಾಜದ ಎಲ್ಲರಿಗೂ ಯಡಿಯೂರಪ್ಪ- ಬೊಮ್ಮಾಯಿ ಸರಕಾರ ನೆರವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಕಾರ್ಯಕರ್ತರು ಜನರ ಕಡೆ ತೆರಳಬೇಕು. ಬಿಜೆಪಿ ಸಮಾಜದ ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಗ್ಗೆ ಜನರಿಗೆ ತಿಳಿಸಬೇಕು. ಇತರ ಪಕ್ಷಗಳು ಭ್ರಷ್ಟಾಚಾರಕ್ಕಾಗಿಯೇ ಕೆಲಸ ಮಾಡುತ್ತಿವೆ ಎಂಬುದನ್ನು ಮನವರಿಕೆ ಮಾಡಬೇಕು ಎಂದು ವಿನಂತಿಸಿದರು.

ರಾಹುಲ್ ಗಾಂಧಿ ಕರ್ನಾಟಕದಲ್ಲಿ ಮಾಡಿದ ಭಾರತ್ ಜೋಡೋ ಯಾತ್ರೆ ಪ್ರಾಯಶ್ಚಿತ್ತ ಯಾತ್ರೆ. ಇವರ ಪೂರ್ವಜರೇ ಭಾರತದ ಒಡೆಯುವಿಕೆಗೆ ಕಾರಣರಾಗಿದ್ದರು ಎಂದು ಟೀಕಿಸಿದರು. ದೇಶದ್ರೋಹಿಗಳ ಜೊತೆ ಅವರು ಯಾತ್ರೆ ಮಾಡಿದ್ದರು ಎಂದು ಆಕ್ಷೇಪಿಸಿದರು. ವಿಕಾಸ ಎಂಬುದು ಕಾಂಗ್ರೆಸ್ಸಿಗರಿಗೆ ಗೊತ್ತೇ ಇಲ್ಲ. ಭ್ರಷ್ಟತೆಯೇ ಕಾಂಗ್ರೆಸ್ ಹಿನ್ನೆಲೆ ಮತ್ತು ಇತಿಹಾಸ. ಅದೇ ಇತಿಹಾಸವನ್ನು ಇಲ್ಲಿಯೂ ಕಾಂಗ್ರೆಸ್ಸಿಗರು ಹೊಂದಿದ್ದಾರೆ ಎಂದ ಅವರು, ಬಿಜೆಪಿಯನ್ನು ಬೆಂಬಲಿಸಿದರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಸಾಧನೆಯ ಜೊತೆ ಮುನ್ನಡೆದಿದೆ. ಸಿದ್ದರಾಮಯ್ಯ ಕರ್ನಾಟಕಕ್ಕಾಗಿ ಏನು ಮಾಡಿದ್ದಾರೆ ಎಂದು ಹೇಳಲು ಅವರಲ್ಲಿ ವಿಷಯವೇ ಇಲ್ಲ, ಶಿವಕುಮಾರ್ ಅವರದೂ ಇದೇ ಸ್ಥಿತಿ ಎಂದರು. ವಂದೇ ಭಾರತ್ ರೈಲು ಭಾರತದ ವಿಕಾಸಕ್ಕೆ ಪೂರಕವಾಗಿದ್ದು, ಕೆಂಪೇಗೌಡ ವಿಮಾನನಿಲ್ದಾಣ ಅಭಿವೃದ್ಧಿಗೆ ಗರಿಷ್ಠ ಮೊತ್ತ ಹಣವನ್ನು ಹೂಡಲಾಗಿದೆ. ನವ ಮಂಗಳೂರು ಬಂದರು ಅಭಿವೃದ್ಧಿಯು ಪ್ರವಾಸೋದ್ಯಮದ ದೃಷ್ಟಿಯಿಂದ ಮಹತ್ವದ ಹೆಜ್ಜೆ ಇಟ್ಟಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿರರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com