
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದ ಗ್ರಾಮಗಳಲ್ಲಿ ಹಂತ ಹಂತವಾಗಿ ನ್ಯಾಯಾಲಯಗಳ ಸ್ಥಾಪಸಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ನಿನ್ನೆಯಷ್ಟೇ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳು ಮತ್ತು ಹೈಕೋರ್ಟ್‌ಗಳಿಂದ ಮಾಹಿತಿ ಕೇಳಿತ್ತು. ನ್ಯಾಯಾಲಯಗಳನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ಯುವುದು ಈ ಉಪಕ್ರಮದ ಉದ್ದೇಶವಾಗಿದೆ.
ಈ ಕುರಿತು ಇತ್ತೀಚೆಗೆ ನಡೆದ ಅಖಿಲ ಭಾರತ ಕಾನೂನು ಸಚಿವರ ಸಭೆಯಲ್ಲಿ ಚರ್ಚೆಗಳು ನಡೆದಿದ್ದು, ರಾಜ್ಯವು ಈ ಉಪಕ್ರಮವನ್ನು ಬೆಂಬಲಿಸಿದೆ ಎಂದು ಕರ್ನಾಟಕ ಕಾನೂನು ಸಚಿವ ಜೆ ಸಿ ಮಾದುಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
ರಾಜ್ಯಾದ್ಯಂತ ಅಗತ್ಯವಿರುವ ಕಡೆ ಗ್ರಾಮಗಳಲ್ಲಿ ಹಂತ ಹಂತವಾಗಿ ಗ್ರಾಮ ನ್ಯಾಯಾಲಯಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ ತಿಳಿಸಿದರು.
ಇದನ್ನೂ ಓದಿ: ನಿರ್ದಯವಾಗಿ ವರ್ತಿಸಿದ್ದಕ್ಕೆ ಬಿಡಿಎಯನ್ನು ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್, 5 ಲಕ್ಷ ರೂ. ನಷ್ಟ ತುಂಬಿಕೊಡಲು ಆದೇಶ
ಗ್ರಾಮಗಳಲ್ಲಿ ಸ್ಥಳೀಯವಾಗಿ ಸಮಸ್ಯೆಗಳನ್ನು ಬಗೆಹರಿಸುವ ದಕ್ಷರನ್ನು ಗುರುತಿಸುವ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕವು ನ್ಯಾಯಾಲಯಗಳನ್ನು ಸ್ಥಾಪಿಸಿದ ನಂತರ, ನ್ಯಾಯಾಂಗ ಸೇವೆಯನ್ನು ತಳಮಟ್ಟದವರೆಗೆ ಕೊಂಡೊಯ್ದ ದೇಶದ ಕೆಲವು ರಾಜ್ಯಗಳ ಪಟ್ಟಿಗೆ ಸೇರಲಿದೆ. ಈ ದಿಕ್ಕಿನಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಕೇರಳ, ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯಗಳು ಪ್ರಗತಿ ಸಾಧಿಸಿವೆ ಎಂದು ಮಾಹಿತಿ ನೀಡಿದರು.
ಈ ಪ್ರಸ್ತಾವನೆಯನ್ನು ಕಾರ್ಯಗತಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಲು ಕರ್ನಾಟಕವು ನ್ಯಾಯಮೂರ್ತಿಗಳಾದ ದಿನೇಶ್ ಕುಮಾರ್, ಪ್ರಭಾಕರ ಶಾಸ್ತ್ರಿ, ಎಸ್.ಅಮರಣ್ಣನವರ್ ಮತ್ತು ಎಸ್.ರಾಚಯ್ಯ ಅವರನ್ನು ಒಳಗೊಂಡ ಹೈಕೋರ್ಟ್ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಉದ್ದೇಶಕ್ಕಾಗಿ ಸರ್ಕಾರವೂ 25 ಲಕ್ಷ ರೂಪಾಯಿಯನ್ನು ಮೀಸಲಿಟ್ಟಿದೆ. ಪ್ರತಿ ಹಳ್ಳಿಯಲ್ಲಿ ನ್ಯಾಯಾಂಗ ಅಧಿಕಾರಿಯನ್ನು ನೇಮಿಸುವ ಪ್ರಕ್ರಿಯೆಯು ಇದು ಒಳಗೊಂಡಿರುತ್ತದೆ. ಗ್ರಾಮಗಳಲ್ಲಿ ನ್ಯಾಯಾಲಯಗಳು ಸ್ಥಾಪನೆಗೊಂಡಿಡಿದ್ದೇ ಆದರೆ, ಕಾನೂನು ಸಮಸ್ಯೆಗಳಿಗೆ ಇಲ್ಲಿನ ಜನರು ಜಿಲ್ಲೆಯ ದೊಡ್ಡ ಪೀಠಗಳಿಗೆ ಹೋಗಬೇಕಾಗುವುದಿಲ್ಲ.