KGF-2 ಹಾಡು ಬಳಕೆ: ರಾಹುಲ್‌ ಗಾಂಧಿ ಸೇರಿ 3 ಕೈ ನಾಯಕರ ವಿರುದ್ಧ FIRಗೆ ಹೈಕೋರ್ಟ್ ತಡೆ!

ಭಾರತ್‌ ಜೋಡೋ ಯಾತ್ರೆಯಲ್ಲಿ ಕೆಜಿಎಫ್-2 ಕನ್ನಡ ಚಿತ್ರದ ಸಂಗೀತ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಭಾರತ್ ಜೋಡೋ ಯಾತ್ರೆ
ಭಾರತ್ ಜೋಡೋ ಯಾತ್ರೆ

ಬೆಂಗಳೂರು: ಭಾರತ್‌ ಜೋಡೋ ಯಾತ್ರೆಯಲ್ಲಿ ಕೆಜಿಎಫ್-2 ಕನ್ನಡ ಚಿತ್ರದ ಸಂಗೀತ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆಯು ಕಾಂಗ್ರೆಸ್‌ ನಾಯಕರ ವಿರುದ್ಧ ಭಾರತ್‌ ಜೋಡೋ ಯಾತ್ರೆಯಲ್ಲಿ ಕೆಜಿಎಫ್-2 ಕನ್ನಡ ಚಿತ್ರದ ಸಂಗೀತ ಬಳಕೆ ಆಗಿದೆ ಎಂದು ಕೃತಿಸ್ವಾಮ್ಯ (ಕಾಪಿರೈಟ್‌) ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿತ್ತು. ಈ ಎಫ್‌ಐಆರ್ ರದ್ದುಪಡಿಸಲು ಕೋರಿದ್ದ ಅರ್ಜಿಯನ್ನು ಶುಕ್ರವಾರ ನ್ಯಾಯಪೀಠ ವಿಚಾರಣೆ ನಡೆಸಿ, ರಾಹುಲ್‌ ಗಾಂಧಿ ಸೇರಿ 3 ಕೈ ನಾಯಕರ ವಿರುದ್ಧ ದಾಖಲಾಗಿದ್ದ FIRಗೆ ತಡೆ ನೀಡಿದೆ.

ಕಾಂಗ್ರೆಸ್‌ ಪರವಾಗಿ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ವಾದ ಮಂಡಿಸಿದರು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಜೈರಾಮ್ ರಮೇಶ್‌ ಮತ್ತು ಸುಪ್ರಿಯಾ ಶ್ರೀನಾಥೆ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಮೂವರು ನಾಯಕರ ವಿರುದ್ಧ ಕ್ರಿಮಿನಲ್‌ ಪ್ರಕ್ರಿಯೆಗೆ ಮುಂದಾಗದಂತೆ ನ್ಯಾ. ಸುನೀಲ್ ದತ್ ಅವರಿದ್ದ ಏಕಸದಸ್ಯ ಪೀಠವು ಮಧ್ಯಂತರ ತಡೆ ಆದೇಶ ನೀಡಿತು.

ರಾಹುಲ್‌ ಗಾಂಧಿ ಖುದ್ದು ಹಾಡು ಬಳಸಿಲ್ಲ ಎಂದು ವಾದ
ಕಾಂಗ್ರೆಸ್‌ನ ರಾಹುಲ್ ಪರ ವಾದ ಮಂಡಿಸಿದ ಎ.ಎಸ್. ಪೊನ್ನಣ್ಣ, ಭಾರತ್ ಜೋಡೋ ಯಾತ್ರೆಯ ವಿಡಿಯೋಗಳಲ್ಲಿ ರಾಹುಲ್ ಗಾಂಧಿ ಅವರನ್ನು ಕೆಜಿಎಫ್ 2 ಚಿತ್ರದ ಸಂಗೀತವನ್ನು ಬಳಸಿ ತೋರಿಸಲಾಗಿತ್ತು. ಇದಕ್ಕಾಗಿ ರಾಹುಲ್, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರಿನೇಟ್ ವಿರುದ್ಧ ಕೃತಿಸ್ವಾಮ್ಯ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಕೆಜಿಎಫ್ 2 ಚಿತ್ರದ ಸಂಗೀತವನ್ನು ರಾಹುಲ್ ಗಾಂಧಿ ಅವರು ಖುದ್ದು ಬಳಸಿಲ್ಲ. ರಾಹುಲ್ ಗಾಂಧಿ ಕಾಪಿರೈಟ್​​ ಕಾಯ್ದೆಯನ್ನು ಉಲ್ಲಂಘಿಸಿಲ್ಲ. ಕಾಂಗ್ರೆಸ್​ನ ಅಧಿಕೃತ ವಿಡಿಯೋಗೆ ತುಂಡರಿಸಿದ ಮ್ಯೂಸಿಕ್ ಹಾಕಲಾಗಿದೆ. ಮ್ಯೂಸಿಕ್ ಬಳಕೆ ಹಿಂದೆ ದುರುದ್ದೇಶವಿಲ್ಲ ಕಾಂಗ್ರೆಸ್‌ ಪರ ಎ.ಎಸ್. ಪೊನ್ನಣ್ಣ ಸಮರ್ಥ ವಾದ ಮಂಡಿಸಿದರು.

ಇನ್ನು ದೂರುದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮಸುಂದರ್ ಎಂ.ಎಸ್‌ ಅವರು, ಅರ್ಜಿಯ ವಿಚಾರಣೆಗೆ ಯಾವುದೇ ತುರ್ತಿನ ಅಗತ್ಯವಿಲ್ಲ. ಚಳಿಗಾಲ ರಜೆಯ ನಂತರ ನಡೆಸುವಂತೆ ಕೋರಿದರು. ಭಾರತ್ ಜೋಡೋ ಯಾತ್ರೆಯಲ್ಲಿ ವೈಭವೀಕರಿಸಲು ಸಂಗೀತ ಬಳಸಿರುವುದು ಕಂಡುಬಂದಿದೆ. ಇದರಿಂದ ಕೃತಿಸ್ವಾಮ್ಯ ಕಾಯಿದೆಯ ಸೆಕ್ಷನ್ 63 ಉಲ್ಲಂಘನೆ ಆಗಿದ್ದು, 3 ವರ್ಷಗಳವರೆಗೆ ಜೈಲು ಶಿಕ್ಷೆಗೆ ಅರ್ಹವಾಗಿದೆ. ಐಪಿಸಿ ನಿಬಂಧನೆಗಳ ಅನ್ವಯಕ್ಕೆ ಸಂಬಂಧಿಸಿದಂತೆ, ಕ್ರಿಮಿನಲ್ ಉದ್ದೇಶ ಅಥವಾ ಕ್ರಿಮಿನಲ್ ಪಿತೂರಿ ಇದೆಯೇ ಎಂಬುದು ತನಿಖೆಯ ಮೂಲಕ ಕಂಡು ಹಿಡಿಯಬೇಕಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದೆ. 

ವಾದವಿವಾದ ಆಲಿಸಿ ಹೈಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿದ್ದು ರಾಹುಲ್‌ ಗಾಂಧಿ ಸೇರಿ 3 ಕೈ ನಾಯಕರ ವಿರುದ್ಧ ದಾಖಲಾಗಿದ್ದ FIRಗೆ ತಡೆ ನೀಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com