ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲು ರಾಜ್ಯ ಸರ್ಕಾರ ಚಿಂತನೆ
ರಾಜ್ಯದಾದ್ಯಂತ ಇರುವ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ನಿಷೇಧಿಸುವ ಕುರಿತು ಅನೇಕರಿಂದ ಮನವಿಗಳನ್ನು ಸ್ವೀಕರಿಸಿದ ನಂತರ ರಾಜ್ಯದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮ ದತ್ತಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಚರ್ಚಿಸುತ್ತಿದ್ದಾರೆ.
Published: 19th December 2022 08:16 AM | Last Updated: 19th December 2022 08:16 AM | A+A A-

ಮೊಬೈಲ್ ಫೋನ್ (ಸಂಗ್ರಹ ಚಿತ್ರ)
ಬೆಂಗಳೂರು: ಇತ್ತೀಚಿನ ಮದ್ರಾಸ್ ಹೈಕೋರ್ಟ್ ಆದೇಶದ ನಂತರ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲು ಮುಂದಾಗಿರುವ ತಮಿಳುನಾಡು ರಾಜ್ಯದಂತೆಯೇ, ಕರ್ನಾಟಕವೂ ಸಹ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಾಲಯಗಳಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.
ರಾಜ್ಯದಾದ್ಯಂತ ಇರುವ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ನಿಷೇಧಿಸುವ ಕುರಿತು ಅನೇಕರಿಂದ ಮನವಿಗಳನ್ನು ಸ್ವೀಕರಿಸಿದ ನಂತರ ರಾಜ್ಯದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮ ದತ್ತಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಚರ್ಚಿಸುತ್ತಿದ್ದಾರೆ. ಚಳಿಗಾಲದ ವಿಧಾನಸಭೆ ಅಧಿವೇಶನದ ನಂತರ ಈ ವಿಷಯದ ಬಗ್ಗೆ ನಿರ್ಧರಿಸಬಹುದು ಎನ್ನಲಾಗಿದೆ.
ಸಾಂಕಾಮಿಕ ರೋಗದ ಸಮಯದಲ್ಲಿ ಇ-ಹುಂಡಿಗಳನ್ನು ಪ್ರಾರಂಭಿಸಿದಾಗ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಿರುಮಲದಂತಹ ದೊಡ್ಡ ದೇವಾಲಯಗಳಲ್ಲಿ ಮೊಬೈಲ್ ಫೋನ್‌ಗಳ ಬಳಕೆಗೆ ಅನುಮತಿಯಿಲ್ಲ.
ಪೂಜೆಯ ನಡುವೆ ರಿಂಗ್ ಟೋನ್‌ಗಳ ಹಾವಳಿಯಿಂದ ಕಿರಿಕಿರಿ ಉಂಟಾಗುತ್ತಿದೆ. ಫೋಟೊ ತೆಗೆಯುವುದು, ಗರ್ಭಗುಡಿಗೆ ಬೆನ್ನುಹಾಕಿ ಸೆಲ್ಫಿ ತೆಗೆಯುತ್ತಾರೆ. ಇದರಿಂದ ಏಕಾಗ್ರತೆಗೆ ಭಂಗ ಉಂಟಾಗುತ್ತಿದೆ. ಇದು ಕಳ್ಳತನಕ್ಕೆ ಕಾರಣವಾಗಬಹುದು. ಈ ರೀತಿ ಮೊಬೈಲ್ ಬಳಕೆಗೆ ಅವಕಾಶ ಕಲ್ಪಿಸುವುದರಿಂದ ಭಕ್ತಿಯಿಂದ ದೇವಸ್ಥಾನಕ್ಕೆ ಬರುವವರಲ್ಲಿ ತಪ್ಪು ಕಲ್ಪನೆ ಮೂಡುವ ಸಾಧ್ಯತೆ ಇದೆ. ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವುದರ ಜತೆಗೆ, ಸಾರ್ವಜನಿಕರು ಮೊಬೈಲ್ ಇರಿಸಿ ಒಳಕ್ಕೆ ಬರಲು ಸೂಕ್ತ ವ್ಯವಸ್ಥೆ ಮಾಡಬೇಕು’ ಎಂದು ದೇವಸ್ಥಾನಗಳಲ್ಲಿ ಮೊಬೈಲ್‌ಗಳನ್ನು ನಿಷೇಧಿಸಲು ಬಯಸುವ ಅನೇಕರು ಆಗ್ರಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ದಾಸರಿ ಮಾತನಾಡಿ, ಈ ಕುರಿತು ಇನ್ನೂ ಚರ್ಚೆ ನಡೆಯುತ್ತಿದ್ದು, ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.