ಮತದಾರರ ಪಟ್ಟಿ ಪರಿಷ್ಕರಣೆ: ಪರಿಶೀಲನೆಗೆ ಮನೆ ಮನೆಗೆ ತೆರಳಿದ ಬಿಬಿಎಂಪಿ ಆಯುಕ್ತ!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮತದಾರ ಪಟ್ಟಿಗೆ ಸಂಬಂಧಿಸಿದಂತೆ ಸೇರ್ಪಡೆ ರದ್ದತಿ ಮತ್ತು ಮಾರ್ಪಾಡು ಮಾಡಲಾದ ಮತದಾರರ ಪಟ್ಟಿಯನ್ನು ಸ್ವತಃ ಬಿಬಿಎಂಪಿ ಮುಖ್ಯ ಆಯುಕ್ತರೇ ಸೋಮವಾರ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಶೀಲಿಸುತ್ತಿರುವ ಬಿಬಿಎಂಪಿ ಆಯುಕ್ತ.
ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಶೀಲಿಸುತ್ತಿರುವ ಬಿಬಿಎಂಪಿ ಆಯುಕ್ತ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮತದಾರ ಪಟ್ಟಿಗೆ ಸಂಬಂಧಿಸಿದಂತೆ ಸೇರ್ಪಡೆ ರದ್ದತಿ ಮತ್ತು ಮಾರ್ಪಾಡು ಮಾಡಲಾದ ಮತದಾರರ ಪಟ್ಟಿಯನ್ನು ಸ್ವತಃ ಬಿಬಿಎಂಪಿ ಮುಖ್ಯ ಆಯುಕ್ತರೇ ಸೋಮವಾರ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ರಾಜಾಜಿನಗರ ಹಾಗೂ ಯಶವಂತಪುರ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ನೀಡಿ ನಮೂನೆಗಳ ಪರಿಶೀಲನೆ ನಡೆಸಿದರು.

ರಾಜಾಜಿನಗರ ವ್ಯಾಪ್ತಿಯಲ್ಲಿ 7 ಮನೆಗಳಿಗೆ ಭೇಟಿ ನೀಡಿ ಸೇರ್ಪಡೆ, ರದ್ದತಿ ಹಾಗೂ ಮಾರ್ಪಾಡು ಮಾಡಿರುವ ನಮೂನೆಗಳನ್ನು ಪರಿಶೀಲಿಸಿ ಬಿ.ಎಲ್.ಒ ಗಳು ಎಲ್ಲಾ ಸರಿಯಾದ ಕ್ರಮದಲ್ಲಿ ಮಾಡಿರುವುದನ್ನು ಗಮನಿಸಿ ನಮೂನೆಯಲ್ಲಿ ದೃಢೀಕರಿಸಿ ನಮೂನೆ ಸಲ್ಲಿಸಿರುವವರಿಂದ ಸಹಿ ಪಡೆದುಕೊಳ್ಳಲಾಯಿತು.

ಮೊದಲಿಗೆ ರಾಜಾಜಿನಗರ ವಾರಿಯರ್ ಬೇಕರಿ ಬಳಿಯ ಮನೆಗೆ ಭೇಟಿ ನೀಡಿ ನಮೂನೆಯನ್ನು ಪರಿಶೀಲಿಸಿ, ನಮೂನೆಯ ಪ್ರತಿಯಲ್ಲಿ ಎಲ್ಲವೂ ಸರಿಯಾಗಿರುವುದನ್ನು ಗಮನಿಸಿ ಮುಖ್ಯ ಆಯುಕ್ತರು ನಮೂನೆಯನ್ನು ದೃಢೀಕರಿಸಿ ಸಹಿ ಪಡೆದುಕೊಳ್ಳಲಾಯಿತು. ಉಳಿದಂತೆ ರಾಜಾಜಿನಗರ ಹಾಗೂ ಶಿವನಹಳ್ಳಿ ವ್ಯಾಪ್ತಿಯಲ್ಲಿ 5 ಮನೆಗಳಿಗೆ ಭೇಟಿ ನೀಡಿ ನಮೂನೆಗಳನ್ನು ಪರಿಶೀಲಿಸಿ, ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಹಾಗೂ ಸೇರ್ಪಡೆ, ರದ್ದತಿ ಹಾಗೂ ಮಾರ್ಪಾಡುಗಳಲ್ಲಿ ಯಾವುದೇ ಲೋಪಗಳಿಲ್ಲದಂತೆ ಪರಿಶೀಲಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲು ಸೂಚನೆ
ರಾಜಾಜಿನಗರ ವಾರಿಯರ್ ಬೇಕರಿ ಬಳಿಯ ಬ್ರಿಡ್ಜ್ ಸ್ಟೋನ್ ಎಂಬ ಟಯರ್ ಮಾರಾಟ ಮಳಿಗೆಯಿಂದ ಪಾದಚಾರಿ ಮಾರ್ಗ ಒತ್ತುವರಿಯಾಗಿರುವುದನ್ನು ಗಮನಿಸಿದ ಆಯುಕ್ತರು, ಈ ವೇಳೆ ಅದನ್ನು ತೆರವುಗೊಳಿಸಲು ಮಾಲೀಕರಿಗೆ ಸೂಚನೆ ನೀಡಿದರು. ಶಿವನಗರ ರಸ್ತೆ ಬದಿಯ ಪಾದಚಾರಿ ಮಾರ್ಗ ಒತ್ತುವರಿಯನ್ನು ಗಮಿಸಿ ಕೂಡಲೇ ತೆರವುಗೊಳಿಸಲು ಸೂಚನೆ ನೀಡಿದರು.

53ನೇ ಬಿ ಅಡ್ಡರಸ್ತೆ, 3ನೇ ಬ್ಲಾಕ್ ರಸ್ತೆಯಲ್ಲಿ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲಿ ಹಾಕಿದ್ದು, ಅದನ್ನು ಕೂಡಲೇ ತೆರವುಗೊಳಿಸಿ ಸಂಬಂಧಪಟ್ಟ ಕಟ್ಟಡ ಮಾಲೀಕರಿಗೆ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ವಾರ್ಡ್ ರಸ್ತೆಯಲ್ಲಿ ರಸ್ತೆ ಸಿಂಕ್ ಆಗಿರುವುದನ್ನು ಗಮನಿಸಿ ಕೂಡಲೇ ಅದನ್ನು ಸರಿಪಡಿಸಲು ತಿಳಿಸಿದರು.

ಮಾಗಡಿ ಮುಖ್ಯ ರಸ್ತೆ ಬಳಿ ಪಾದಚಾರಿ ಮಾರ್ಗದಲ್ಲಿ ಒತ್ತುವರಿಯಾಗಿರುವುದನ್ನು ಕಂಡು ಅದನ್ನು ತೆರವುಗೊಳಿಸಲು ಸೂಚನೆ ನೀಡಿದರು. ಮಾಗಡಿ ಮುಖ್ಯ ರಸ್ತೆ ಹೇರೋಹಳ್ಳಿಯ ಬಳಿ ರಸ್ತೆ ದುರಸ್ತಿಯಲ್ಲಿದ್ದು, ಅದನ್ನು ಸರಿಪಡಿಸಲು ತಿಳಿಸಿದರು. ಜೊತೆಗೆ ಮಾಗಡಿ ಮುಖ್ಯ ರಸ್ತೆಯಲ್ಲಿ ರಸ್ತೆ ಗುಂಡಿಗಳು ಬಿದ್ದಿದ್ದು, ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com