ಝಿಕಾ ವೈರಸ್ ಭೀತಿ: 21 ಗರ್ಭಿಣಿಯರ ಪರೀಕ್ಷಾ ವರದಿ ನೆಗೆಟಿವ್, ಆರೋಗ್ಯ ಇಲಾಖೆ ನಿರಾಳ

ರಾಜ್ಯದಲ್ಲಿ ಝಿಕಾ ವೈರಸ್ ಭೀತಿ ಮನೆಮಾಡಿದ್ದು, ಮಂಗಳವಾರ 21 ಗರ್ಭಿಣಿಯರಿಗೆ ನಡೆಸಿದ ಝಿಕಾ ವೈರಸ್ ಪರೀಕ್ಷಾ ವರದಿ ನೆಗೆಟಿವ್ ಆದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ರಾಯಚೂರು: ರಾಜ್ಯದಲ್ಲಿ ಝಿಕಾ ವೈರಸ್ ಭೀತಿ ಮನೆಮಾಡಿದ್ದು, ಮಂಗಳವಾರ 21 ಗರ್ಭಿಣಿಯರಿಗೆ ನಡೆಸಿದ ಝಿಕಾ ವೈರಸ್ ಪರೀಕ್ಷಾ ವರದಿ ನೆಗೆಟಿವ್ ಆದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೂ 30 ಗರ್ಭಿಣಿಯರ ವರದಿಗಾಗಿ ಕಾಯಲಾಗುತ್ತಿದೆ.

ರಾಯಚೂರು ಜಿಲ್ಲೆಯಲ್ಲಿ ಕಳೆದ ವಾರ ಐದು ವರ್ಷದ ಬಾಲಕಿಗೆ ಝಿಕಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಗರ್ಭಿಣಿಯರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಮೂಲಗಳ ಪ್ರಕಾರ, ಉಳಿದ ವರದಿಗಳು ಒಂದೆರಡು ದಿನಗಳಲ್ಲಿ ಬರುವ ನಿರೀಕ್ಷೆಯಿದೆ.
ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್‌ ಘೋಷಿಸಿದೆ. ರೋಗ ಹರಡುವುದನ್ನು ತಡೆಯಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದೆ.

ಬೆಂಗಳೂರಿನ ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿರುವ ಫೋರ್ಟಿಸ್‌ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರ ಡಾ. ಆದಿತ್ಯ ಎಸ್‌ ಚೌತಿ ಮಾತನಾಡಿ, 'ಶಿಶುಗಳಲ್ಲಿ ಗಂಭೀರವಾದ ಜನ್ಮ ದೋಷಗಳು ಸೇರಿದಂತೆ ಗರ್ಭಪಾತದ ಅಪಾಯ ಹೆಚ್ಚಿರುವ ಕಾರಣ ಗರ್ಭಿಣಿಯರು ಈ ರೋಗದ ಬಗ್ಗೆ ಜಾಗರೂಕರಾಗಿರಬೇಕು. ಈ ರೋಗವನ್ನು ತಡೆಗಟ್ಟಲು ಕೆಲವು ಕ್ರಮಗಳನ್ನು ಅನುಸರಿಸುವುದು ಉತ್ತಮ. ಸೊಳ್ಳೆ ಕಡಿತವನ್ನು ತಡೆಗಟ್ಟಲು ಪ್ರತಿಯೊಬ್ಬರೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ, ಸೊಳ್ಳೆಗಳ ಸಂತಾನೋತ್ಪತ್ತಿಯ ಸ್ಥಳಗಳನ್ನು ನಾಶಪಡಿಸಿ ಅಥವಾ ಸಂಭವಿಸದಂತೆ ನೋಡಿಕೊಳ್ಳಿ' ಎಂದರು.

'ಝಿಕಾ ಜ್ವರವು ಝಿಕಾ ವೈರಸ್‌ನಿಂದ ಉಂಟಾಗುವ ವೈರಲ್ ಕಾಯಿಲೆಯಾಗಿದೆ ಮತ್ತು ಸೊಳ್ಳೆ ಕಡಿತದಿಂದ ಇದು ಇತರರಿಗೆ ಹರಡುತ್ತದೆ. ಕೆಲವು ನಿರ್ದಿಷ್ಟ ತೊಡಕುಗಳಿವೆ. ಅಪರೂಪದ ಸಂದರ್ಭಗಳಲ್ಲಿ, ಇದು ನರಮಂಡಲದ ತೊಡಕುಗಳಿಗೆ ಕಾರಣವಾಗಬಹುದು, ಇದನ್ನು ನಾವು ಗುಯಿಲಿನ್-ಬಾರೆ ಸಿಂಡ್ರೋಮ್ ಎಂದು ಕರೆಯುತ್ತೇವೆ. ಸೋಂಕಿನ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳದ ಜನರಲ್ಲೂ ಇದು ಸಾಧ್ಯ' ಎಂದು ಅವರು ಹೇಳಿದರು.

1947 ರಲ್ಲಿ ಆಫ್ರಿಕನ್ ದೇಶಗಳಲ್ಲಿ ಝಿಕಾ ವೈರಸ್ ಮೊದಲ ಬಾರಿಗೆ ವರದಿಯಾಗಿದೆ. ಸದ್ಯ, ಈ ವೈರಲ್ ಕಾಯಿಲೆಗೆ ಚಿಕಿತ್ಸೆ ನೀಡಲು ಯಾವುದೇ ಲಸಿಕೆಗಳು ಲಭ್ಯವಿಲ್ಲ. ಈ ಸೋಂಕನ್ನು ನಿಯಂತ್ರಿಸಲು ಉತ್ತಮ ಮಾರ್ಗವೆಂದರೆ ಸಂಭಾವ್ಯ ಸೊಳ್ಳೆಗಳ ಸಂತಾನೋತ್ಪತ್ತಿಯ ಸ್ಥಳಗಳನ್ನು ತಡೆಗಟ್ಟುವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಸೊಳ್ಳೆಗಳು ಡೆಂಗ್ಯೂ, ಮಲೇರಿಯಾ ಮುಂತಾದ ಅನೇಕ ವೈರಲ್ ಕಾಯಿಲೆಗಳಿಗೆ ಕಾರಣವಾಗಬಹುದು. ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡುವುದನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ.

ಕರ್ನಾಟಕದಲ್ಲಿ ಒಂದು ಪ್ರಕರಣ ವರದಿಯಾಗಿದ್ದರೂ, ರೋಗ ಹರಡುವುದನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಯಾವುದೇ ವ್ಯಕ್ತಿಯು ಒಂದು ವಾರಕ್ಕಿಂತ ಹೆಚ್ಚು ಕಾಲ ಕಾಯಿಲೆಯಿಂದ ಬಳಲುತ್ತಿದ್ದರೆ, ಅವರು ವೈದ್ಯರನ್ನು ಸಂಪರ್ಕಿಸಿ ಮತ್ತು ತಕ್ಷಣವೇ ಮೌಲ್ಯಮಾಪನ ಮಾಡಬೇಕು ಎಂದು ಡಾ. ರಮೇಶ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com