ಬೆಳಗಾವಿ: ಸುವರ್ಣ ಸೌಧ ಎದುರು ವಕೀಲರ ಪ್ರತಿಭಟನೆ: ನಾಲ್ಕು ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

ವಕೀಲರ ಸಂರಕ್ಷಣಾ ಕಾಯ್ದೆ ರೂಪಿಸಿ, ಜಾರಿಗೊಳಿಸಲು ಆಗ್ರಹಪಡಿಸಿ ಅಪಾರ ಸಂಖ್ಯೆಯ ವಕೀಲರು ಮಂಗಳವಾರ ಸುವರ್ಣ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ವಕೀಲರ ಪ್ರತಿಭಟನೆ
ವಕೀಲರ ಪ್ರತಿಭಟನೆ

ಬೆಳಗಾವಿ: ವಕೀಲರ ಸಂರಕ್ಷಣಾ ಕಾಯ್ದೆ ರೂಪಿಸಿ, ಜಾರಿಗೊಳಿಸಲು ಆಗ್ರಹಪಡಿಸಿ ಅಪಾರ ಸಂಖ್ಯೆಯ ವಕೀಲರು ಮಂಗಳವಾರ ಸುವರ್ಣ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತ ವಕೀಲರು ಕೆಲ ಗಂಟೆಗಳ ಕಾಲ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದರು. ಅಲ್ಲದೇ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು. 

ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಮಧ್ಯಾಹ್ನ 2.30ರ ನಂತರ ಕಿಲೋ ಮೀಟರ್‌ಗಟ್ಟಲೆ ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದವು. ಪೊಲೀಸರು ತಡೆಯಲೂ ಯತ್ನಿಸುತ್ತಿದ್ದರೂ ಧರಣಿ ನಿರತ ವಕೀಲರ ಅನೇಕ ಗುಂಪುಗಳು ಬ್ಯಾರಿಕೇಡ್ ತೆಗೆದು ಸೌಧಕ್ಕೆ ಘೇರಾವ್ ಹಾಕಲು ಯತ್ನಿಸಿದರು. ಬೆಳಗಾವಿ ಪೊಲೀಸ್ ಆಯುಕ್ತರು ಸೇರಿದಂತೆ ಹಲವು ಮಂದಿ ಆಕ್ರೋಶಗೊಂಡ ವಕೀಲರನ್ನು ಸಮಾಧಾನ ಪಡಿಸಲು ಯತ್ನಿಸಿದಾಗ ಮಾತಿನ ಚಕಮಕಿ ನಡೆಯಿತು. ಕೆಲ ವಕೀಲರು ಗೇಟ್ ಹತ್ತಿ ಕಾನೂನು ಸಚಿವ ಮಾಧುಸ್ವಾಮಿ ವಿರುದ್ಧ ಘೋಷಣೆ ಕೂಗಿದಾಗ ಸುವರ್ಣ ಸೌಧದ ಪ್ರವೇಶ ದ್ವಾರದ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

   ಬಳಿಕ ಮಾಧುಸ್ವಾಮಿಪ್ರತಿಭಟನಾಕಾರರನ್ನು ಭೇಟಿಯಾಗಿ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು. ಆದರೂ ಪಟ್ಟು ಬಿಡದ ವಕೀಲರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದರು. ನಂತರ ಕಂದಾಯ ಸಚಿವ ಆರ್.ಅಶೋಕ್ ಪ್ರತಿಭಟನಾಕಾರರನ್ನು ಭೇಟಿ ಮಾಡಿ, ಮನವೊಲಿಸಿದರು.

ವಕೀಲರ ಹಿತದೃಷ್ಟಿಯಿಂದ ವಕೀಲರ ರಕ್ಷಣಾ ಮಸೂದೆಯನ್ನು ಅಂಗೀಕರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ಸೂಚಿಸಿದ್ದು, ತಮ್ಮ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ ಎಂದು ಅಶೋಕ್ ಹೇಳಿದರು. ಕೆಲವು ಗಂಟೆಗಳ ನಂತರ ವಕೀಲರು ಅಂತಿಮವಾಗಿ ಪ್ರತಿಭಟನೆ  ಹಿಂಪಡೆಯಲು ನಿರ್ಧರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com