ಮತ್ತೊಂದು ಬಿಎಂಟಿಸಿ ಬಸ್ ಗೆ ಬೆಂಕಿ, ಪ್ರಯಾಣಿಕರು ಅಪಾಯದಿಂದ ಪಾರು
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಬಿಎಂಟಿಸ್ ಬಸ್ ಅಗ್ನಿ ಅನಾಹುತಕ್ಕೀಡಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Published: 01st February 2022 06:08 PM | Last Updated: 01st February 2022 07:41 PM | A+A A-

ಬಿಎಂಟಿಸಿ ಬಸ್ ಗೆ ಬೆಂಕಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಬಿಎಂಟಿಸ್ ಬಸ್ ಅಗ್ನಿ ಅನಾಹುತಕ್ಕೀಡಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೌದು.. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ಬಿಎಂಟಿಸಿ ಬಸ್ ನಡುರಸ್ತೆಯಲ್ಲೇ ಹೊತ್ತಿ ಉರಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಕನಕಪುರ ರಸ್ತೆ ಸೌತ್ಎಂಡ್ ಸರ್ಕಲ್ನಲ್ಲಿ ಮಂಗಳವಾರ ಮಧ್ಯಾಹ್ನ 1.15ರ ಸುಮಾರಿಗೆ ಬಿಎಂಟಿಸಿ ಬಸ್ ಬೆಂಕಿಗೆ ಆಹುತಿಯಾಗಿದೆ. ಮೊದಲು ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಡ್ರೈವರ್ ಮತ್ತು ಕಂಡಕ್ಟರ್ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.
ಕ್ಷಣಾರ್ಧದಲ್ಲೇ ಬೆಂಕಿಯ ಕೆನ್ನಾಲಗೆ ಇಡೀ ಬಸ್ ಗೆ ವ್ಯಾಪಿಸಿದೆ. ಈ ಅವಘಡದ ವೇಳೆ ಬಸ್ನಲ್ಲಿ ಸುಮಾರು 20 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆ ಆಗಿಲ್ಲ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕಳೆದ 10 ದಿನಗಳ ಅಂತರದಲ್ಲಿ ನಗರದಲ್ಲಿ ನಡೆದ 2ನೇ ಬಸ್ ಅಗ್ನಿ ಅವಘಡ ಪ್ರಕರಣ ಇದಾಗಿದೆ. ಜ.21ರಂದು ಕೆ.ಆರ್.ಮಾರುಕಟ್ಟೆಗೆ ತೆರಳುತ್ತಿದ್ದ ಬಿಎಂಟಿಸಿ ಬಸ್ವೊಂದು ಚಾಮರಾಜಪೇಟೆಯ ಮಕ್ಕಳಕೂಟ ಬಳಿ ನಡುರಸ್ತೆಯಲ್ಲೇ ಹೊತ್ತಿ ಉರಿದಿತ್ತು.