
ಚಲ್ಲಾಪಿಲ್ಲಿಯಾಗಿರುವ ವಸ್ತುಗಳು
ಮಡಿಕೇರಿ: ಕೊಡಗಿನ ನಾಪೋಕ್ಲು ಬಳಿ ಕಳೆದ ಸೋಮವಾರ ರಾತ್ರಿ ನಿವೃತ್ತ ನ್ಯಾಯಾಧೀಶ ವಜಂದ ಬೋಪಯ್ಯನವರ ಸಹೋದರಿಯರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.
ಇಬ್ಬರು ವಯೋವೃದ್ಧ ಮಹಿಳೆಯರನ್ನು ಮನೆಯೊಳಗೆ ಕಟ್ಟಿ ಹಾಕಿ 2.5 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸೋಮವಾರ ತಡರಾತ್ರಿ ನಾಲ್ವರು ಅಪರಿಚಿತರು ಸಹೋದರಿಯರಾದ 78 ವರ್ಷದ ಜಾನಕಿ ಮತ್ತು 68 ವರ್ಷದ ಅಮ್ಮಕ್ಕಿ ಅವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ.
ನಾಲ್ವರು ಆರೋಪಿಗಳು ಮನೆಯ ಬಾಗಿಲು ಮುರಿದು ಜಾನಕಿ ಹಾಗೂ ಅಮ್ಮಕ್ಕಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇಬ್ಬರನ್ನು ಕೋಣೆಯೊಳಗೆ ಕಟ್ಟಿ ಹಾಕಿದ್ದಾರೆ. ನಂತರ ನಾಲ್ವರು ಮನೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ್ದು, 2.5 ಲಕ್ಷ ರೂಪಾಯಿ ನಗದು ಹಾಗೂ 83 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿದ್ದಾರೆ.
ಕೈಕಟ್ಟಿದ ಹಗ್ಗವನ್ನು ಬಿಚ್ಚಿಕೊಂಡ ನಂತರ ಸಹೋದರ ಬೋಪಯ್ಯ ಅವರಿಗೆ ಕರೆ ಮಾಡಿ ನಾಪೋಕ್ಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಸಹೋದರಿಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆಗಾಗಿ ನಾಪೋಕ್ಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.