ಕಾಲೇಜುಗಳ ಒತ್ತಡ ತಗ್ಗಿಸಲು ಅತಿಥಿ ಉಪನ್ಯಾಸಕರ ನೇಮಕ: ಹಲವರಿಗೆ ವೇತನವೇ ಇಲ್ಲ; ಶಿಕ್ಷಣ ಇಲಾಖೆ ವಿರುದ್ಧ ಹಿಡಿಶಾಪ
ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಮೂಲಕ ಸಮಸ್ಯೆ ನೀಗಿತಾದರೂ ಉಪನ್ಯಾಸಕರ ವೇತನ ಸಮಸ್ಯೆ ಮಾತ್ರ ಇನ್ನೂ ನೀಗಿಲ್ಲ.
Published: 01st February 2022 07:16 PM | Last Updated: 01st February 2022 08:24 PM | A+A A-

ಸಂಗ್ರಹ ಚಿತ್ರ
ಮಡಿಕೇರಿ: ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಮೂಲಕ ಸಮಸ್ಯೆ ನೀಗಿತಾದರೂ ಉಪನ್ಯಾಸಕರ ವೇತನ ಸಮಸ್ಯೆ ಮಾತ್ರ ಇನ್ನೂ ನೀಗಿಲ್ಲ.
ಹೌದು.. ಮಡಿಕೇರಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಂಡ ಸರ್ಕಾರ ಅವರಲ್ಲಿ ಕೆಲವರಿಗೆ ಕಳೆದ ಆಗಸ್ಟ್‌ನಿಂದ ವೇತನ ಪಾವತಿ ಮಾಡಿಲ್ಲ.
ರಾಜ್ಯ ಸರ್ಕಾರದ ಆದೇಶದ ನಂತರ, ಜಿಲ್ಲೆಯ 16 ಸರ್ಕಾರಿ ಪಿಯು ಕಾಲೇಜುಗಳಿಗೆ 40 ಅತಿಥಿ ಉಪನ್ಯಾಸಕರನ್ನು ಆಗಸ್ಟ್‌ನಲ್ಲಿ ನೇಮಿಸಲಾಗಿತ್ತು. ಅವರಲ್ಲಿ ಹೆಚ್ಚಿನವರು ಮುಖ್ಯ (ಕೋರ್ಸ್) ವಿಷಯಗಳನ್ನು ಬೋಧಿಸುತ್ತಿದ್ದಾರೆಯಾದರೂ, ಈ 40 ಉಪನ್ಯಾಸಕರ ಪೈಕಿ 28 ಉಪನ್ಯಾಸಕರಿಗೆ ಮಾತ್ರ ಸರ್ಕಾರದ ವೇತನ ಮಂಜೂರಾಗಿದ್ದು, ಉಳಿದವರಿಗೆ ವೇತನ ಬಿಡುಗಡೆಯಾಗಿಲ್ಲ. ಹೀಗಾಗಿ ವೇತನ ಪಾವತಿಯಾಗದ ಅತಿಥಿ ಉಪನ್ಯಾಸಕರು ಪರೋಕ್ಷವಾಗಿ ಕೆಲಸಕ್ಕೆ ಹಾಜರಾಗುವುದನ್ನು ನಿಲ್ಲಿಸುವಂತೆ ಒತ್ತಾಯಿಸಲ್ಪಡುತ್ತಿದ್ದಾರೆ.
ಮಡಿಕೇರಿ ಜೂನಿಯರ್ ಕಾಲೇಜಿಗೆ ಆಗಸ್ಟ್‌ನಲ್ಲಿ ನೇಮಕಗೊಂಡ ಏಳು ಅತಿಥಿ ಉಪನ್ಯಾಸಕರ ಪೈಕಿ ಇಬ್ಬರಿಗೆ ಮಾತ್ರ ವೇತನ ಮಂಜೂರಾಗಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅತಿಥಿ ಉಪನ್ಯಾಸಕರೊಬ್ಬರು ಆಗಸ್ಚ್ ನಿಂದ ನಮಗೆ ವೇತನ ಪಾವತಿಯಾಗಿಲ್ಲ. ಬಾಕಿ ಇರುವ ಎಲ್ಲ ತಿಂಗಳ ವೇತನ ಒಟ್ಟಿಗೆ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದೇವೆ. ಅದೇ ಆಶಯದಲ್ಲಿ ನಾವು ಕೆಲಸ ಮುಂದುವರೆಸುತ್ತಿದ್ದೇವೆ. ಆದರೆ ವೇತನ ನೀಡದೆ ಆರು ತಿಂಗಳು ಕಳೆದಿವೆ’ ಎಂದು ತಿಳಿಸಿದ್ದಾರೆ.
ಮತ್ತೋರ್ವ ಶಿಕ್ಷಕರು ಮಾತನಾಡಿ ವೇತನ ವಿಚಾರವಾಗಿ ನಾವು ಪಿಯು ಬೋರ್ಡ್ ಉಪನಿರ್ದೇಶಕರನ್ನು ಭೇಟಿ ಮಾಡಿದರೂ ತಮ್ಮ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡರು.
ಇನ್ನು, 28 ಉಪನ್ಯಾಸಕರಿಗೆ ಸೆಪ್ಟೆಂಬರ್ ತಿಂಗಳಿನಿಂದ ಮಂಜೂರಾದ ವೇತನ ಬಿಡುಗಡೆ ಮಾಡಲಾಗಿದ್ದು, ಆಗಸ್ಟ್ ತಿಂಗಳ ವೇತನ ಬಂದಿಲ್ಲ. ಈ ನಡುವೆ ವೇತನ ಸಿಗದ 12 ಉಪನ್ಯಾಸಕರು ಪರದಾಡುವ ಸ್ಥಿತಿಯಲ್ಲಿದ್ದು, ಕೆಲವರು ಕೆಲಸಕ್ಕೆ ಹಾಜರಾಗುವುದನ್ನು ಕೂಡ ನಿಲ್ಲಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಪರದಾಡುವ ಸ್ಥಿತಿಗೆ ತಲುಪಿದ್ದು, ಕಾಲೇಜು ಆಡಳಿತ ಮಂಡಳಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಉಪನ್ಯಾಸಕರಿಲ್ಲದೇ ಬಾಕಿ ಪಠ್ಯಗಳು ಪ್ರಮಾಣ ಹೆಚ್ಚಾಗುತ್ತಿದ್ದು, ಈ ಉಪನ್ಯಾಸಕರ ಬೆಂಬಲವಿಲ್ಲದೆ ಕಾಲೇಜು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಸಾಧ್ಯವಾಗಿದೆ.
ಜಿಲ್ಲಾಧಿಕಾರಿಗಳು ಯಾವುದೇ ನೆರವು ನೀಡದ ಕಾರಣ ಶಾಸಕರು ಮತ್ತು ರಾಜ್ಯ ಸಚಿವರು ಮಧ್ಯಪ್ರವೇಶಿಸಿ ವೇತನ ಮಂಜೂರು ಮಾಡುವಂತೆ ಉಪನ್ಯಾಸಕರು ಮನವಿ ಮಾಡಿದ್ದಾರೆ.
ಈ ವಿಚಾರವಾಗಿ ಡಿಡಿಪಿಯು ಪುಟ್ಟರಾಜು ಅವರನ್ನು ಪ್ರಶ್ನಿಸಿದಾಗ, ಈ ಕುರಿತು ರಾಜ್ಯಕ್ಕೆ ಪತ್ರ ಬರೆದಿದ್ದೇವೆ. ಆದರೂ ಹಣ ಬಿಡುಗಡೆಯಾಗಿಲ್ಲ, ಹಣ ಮಂಜೂರಾಗುವವರೆಗೆ ಏನೂ ಮಾಡಲು ಸಾಧ್ಯವಿಲ್ಲ. ಆದರೂ 28 ಉಪನ್ಯಾಸಕರಿಗೆ ಆಗಸ್ಟ್ ತಿಂಗಳ ಬಾಕಿ ವೇತನ ಬಿಡುಗಡೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.