ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ: ಶಶಿಕಲಾ, ಇಳವರಸಿ, ಇನ್ನೂ ಹಲವರ ವಿರುದ್ಧ ಎಸಿಬಿ ಚಾರ್ಜ್ ಶೀಟ್
ಅಕ್ರಮ ಆಸ್ತಿ ಸಂಪಾದನೆಯಡಿ ಜೈಲು ಶಿಕ್ಷೆ ಅನುಭವಿಸಿರುವ ತಮಿಳುನಾಡಿನ ವಿ ಶಶಿಕಲಾ ಹಾಗೂ ಬೆಂಗಳೂರು ಕೇಂದ್ರ ಕಾರಾಗೃಹದ ಜೈಲು ಅಧಿಕಾರಿಗಳಿಗೆ ಮತ್ತೆ ಸಂಕಷ್ಟ ಎದುರಾಗಿದೆ.
Published: 02nd February 2022 08:05 PM | Last Updated: 03rd February 2022 01:39 PM | A+A A-

ಜೈಲಿನಲ್ಲಿ ಶಶಿಕಲಾಗೆ ವಿಶೇಷ ಆತಿಥ್ಯ
ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆಯಡಿ ಜೈಲು ಶಿಕ್ಷೆ ಅನುಭವಿಸಿರುವ ತಮಿಳುನಾಡಿನ ವಿ ಶಶಿಕಲಾ ಹಾಗೂ ಬೆಂಗಳೂರು ಕೇಂದ್ರ ಕಾರಾಗೃಹದ ಜೈಲು ಅಧಿಕಾರಿಗಳಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ದಿನಗಳಲ್ಲಿ ರಾಜಾತಿಥ್ಯ ಕಲ್ಪಿಸಲು ಶಶಿಕಲಾರಿಂದ ಲಂಚ ಪಡೆದ ಆರೋಪ ಪ್ರಕರಣದ ತನಿಖೆ ಕೈಗೊಂಡಿದ್ದ ಎಸಿಬಿ ಈಗ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ, ಇಳವರಸಿ ಆಗಿನ ಜೈಲು ಅಧಿಕಾರಿ ಹಾಗೂ ಇನ್ನೂ ಮೂವರು ಸಿಬ್ಬಂದಿಗಳ ಹೆಸರನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. 2017 ರಲ್ಲಿ ಅಕ್ರಮ ಆಸ್ತಿ ಗಳಿಗೆ ಪ್ರಕರಣದಡಿ ಜೈಲು ಸೇರಿದ್ದ ಶಶಿಕಲಾ ಹಾಗೂ ಇಳವರಸಿ 2021 ರಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು.
ಲಂಚ, ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ಆರೋಪಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ತಿ ಹಾಗೂ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ಫೆ.02 ರಂದು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಡಿ.30, 2021 ರಲ್ಲಿ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲು ಸರ್ಕಾರ ಅನುಮತಿ ನೀಡಿರುವುದಾಗಿ ಸರ್ಕಾರದ ಪರ ವಕೀಲರು ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ಎಸಿಬಿ ಪರ ವಕೀಲರು ಮಾತನಾಡಿ ತನಿಖಾ ಸಂಸ್ಥೆ ಸಂಬಂಧಪಟ್ಟ ಕೋರ್ಟ್ ನಲ್ಲಿ ಚಾರ್ಜ್ ಶೀಟ್ ನ್ನು ಜ.7 ರಂದು 2022 ರಲ್ಲಿ ಸಲ್ಲಿಸಿದ್ದು ಸರ್ಕಾರ ಇದಕ್ಕೆ ಅನುಮತಿ ನೀಡಿದೆ ಎಂದು ಹೇಳಿದ್ದಾರೆ.
ಶಶಿಕಲಾ, ಇಳವರಸಿ ಜೊತೆ ಕೃಷ್ಣ ಕುಮಾರ್, ಡಾ. ಆರ್ ಅನಿತಾ, ಬಿ ಸುರೇಶ್, ಗಜರಾಜ ಮಾಕನೂರು ಪ್ರಮುಖ ಆರೋಪಿಗಳಾಗಿದ್ದಾರೆ. ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರನ್ನೊಳಗೊಂಡಂತೆ ಭ್ರಷ್ಟಾಚಾರದ ಪ್ರಕರಣದಲ್ಲಿ ಶಶಿಕಲಾ, ಇಳವರಸಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ವೇಳೆ ಲಂಚ ಪಡೆದು ಜೈಲಿನಲ್ಲಿ ಸವಲತ್ತುಗಳನ್ನು ನೀಡಿದ್ದ ವಿಷಯವಾಗಿ ಅಂತಿಮ ವರದಿಯನ್ನು ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು 2021 ರಲ್ಲಿ ಚೆನ್ನೈ ನ ಸಾಮಾಜಿಕ ಕಾರ್ಯಕರ್ತೆ ಗೀತಾ ಹಾಗೂ ಶಿಕ್ಷಣತಜ್ಞರಾದ ಕೆಎಸ್ ಗೀತಾ ಎಂಬುವವರು ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.