ಬೆಂಗಳೂರಿನಲ್ಲಿ ಟೋಯಿಂಗ್ ಸದ್ಯಕ್ಕೆ ಸ್ಥಗಿತ, ಹೊಸ ವ್ಯವಸ್ಥೆ 15 ದಿನಗಳಲ್ಲಿ ಜಾರಿ: ಗೃಹ ಸಚಿವ ಆರಗ ಜ್ಞಾನೇಂದ್ರ
ರಾಜಧಾನಿ ಬೆಂಗಳೂರಿನಲ್ಲಿ ವಾಹನಗಳ ಮೇಲಿನ ಟೋಯಿಂಗ್ ನ್ನು ಹೊಸ ಸರಳೀಕೃತ ಕ್ರಮಗಳನ್ನು ಜಾರಿಗೆ ತರುವವರೆಗೆ ನಿಲ್ಲಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೊಂದಿಗೆ ಚರ್ಚಿಸಿ ಇನ್ನು 15 ದಿನಗಳಲ್ಲಿ ಹೊಸ ಕ್ರಮ ತರಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
Published: 03rd February 2022 10:33 AM | Last Updated: 03rd February 2022 10:33 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾಹನಗಳ ಮೇಲಿನ ಟೋಯಿಂಗ್ ನ್ನು ಹೊಸ ಸರಳೀಕೃತ ಕ್ರಮಗಳನ್ನು ಜಾರಿಗೆ ತರುವವರೆಗೆ ನಿಲ್ಲಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೊಂದಿಗೆ ಚರ್ಚಿಸಿ ಇನ್ನು 15 ದಿನಗಳಲ್ಲಿ ಹೊಸ ಕ್ರಮ ತರಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಟೋಯಿಂಗ್ ಹೆಸರಿನಲ್ಲಿ ಸಾರ್ವಜನಿಕರ ಮೇಲೆ ಸಂಚಾರಿ ಪೊಲೀಸ್ ಇಲಾಖೆಯಿಂದ ವಿಪರೀತ ತೊಂದರೆಯಾಗುತ್ತಿದೆ ಎಂದು ಇತ್ತೀಚೆಗೆ ಬಹಳ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಿನ್ನೆ ಗೃಹ ಸಚಿವರು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.ಸಭೆ ಮುಗಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಸಾರ್ವಜನಿಕರಿಗೆ ಕಿರುಕುಳವಾಗುವುದನ್ನು ತಡೆಯಲು ಹೊಸ ಸರಳ ಕ್ರಮಗಳನ್ನು ಜಾರಿಗೆ ತರಬೇಕೆಂದು ನಿರ್ಧರಿಸಲಾಯಿತು ಎಂದರು.
ಸುಗಮ ಸಂಚಾರಕ್ಕೆ ಕ್ರಮಗಳು, ಆದ್ಯತೆ: ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಸುಗಮ ಮಾಡಿಕೊಡುವುದು ನಮ್ಮ ಆದ್ಯತೆಯಾಗಿದೆ, ಹಾಗೆಂದು ಟೋಯಿಂಗ್ ಸಾರ್ವಜನಿಕರಿಗೆ ಕಿರಿಕಿರಿಯಾಗಬಾರದು. ಬೆಂಗಳೂರಿನಲ್ಲಿ ಈಗಿರುವ ಟೋಯಿಂಗ್ ವ್ಯವಸ್ಥೆಯನ್ನು ಸದ್ಯಕ್ಕೆ ನಿಲ್ಲಿಸಲಾಗುವುದು ಎಂದರು.
ಸಂಚಾರ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮತ್ತು ಸಂಚಾರಿ ಪೊಲೀಸರ ವಿರುದ್ಧ ಜನರ ಸಾಮಾನ್ಯ ದೂರುಗಳ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಮುಖ್ಯಮಂತ್ರಿಗಳೊಂದಿಗೆ ಇನ್ನೊಂದು ಸುತ್ತು ಮಾತುಕತೆ ನಡೆಸಿದ ನಂತರ ಹೊಸ ಟೋಯಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದರು.
ಕಳೆದ ಜನವರಿ 24ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಸಂಬಂಧಿಸಿದ ಸಂಚಾರ ಎಎಸ್ಐ ಕರ್ತವ್ಯದಲ್ಲಿದ್ದಾಗ ನ್ಯೂನತೆ ಹೊಂದಿದ್ದ ಮಹಿಳೆಗೆ ಟೋಯಿಂಗ್ ವಿಚಾರದಲ್ಲಿ ಕಿರುಕುಳ ನೀಡಿದ್ದು ಸುದ್ದಿಯಾಗಿತ್ತು. ಎಎಸ್ಐಯನ್ನು ಕರ್ತವ್ಯದಿಂದ ವಜಾ ಮಾಡಲಾಗಿದ್ದು, ಇದಾದ ಬಳಿಕ ನಗರದಲ್ಲಿ ಟೋಯಿಂಗ್ ಅವಶ್ಯಕತೆ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.