ಕುಂದಾಪುರ: ಮೂರನೇ ದಿನವೂ ಹಿಜಾಬ್ ಧರಿಸಿ ಬಂದವರಿಗೆ ಕಾಲೇಜಿಗೆ ಪ್ರವೇಶ ನಿರಾಕರಣೆ! ಪೋಷಕರೊಂದಿಗೆ ಪ್ರತಿಭಟನೆ
ಹಿಜಾಬ್ ವಿವಾದದಿಂದಾಗಿ ಕಳೆದ ಮೂರು ದಿನಗಳಿಂದ ರಾಷ್ಟ್ರಮಟ್ಟದಲ್ಲಿಯೂ ಸುದ್ದಿಯಾಗುತ್ತಿರುವ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರವೂ ಕೂಡಾ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜ್ ಆವರಣದೊಳಗೆ ಪ್ರವೇಶವನ್ನು ನಿರಾಕರಿಸಲಾಯಿತು.
Published: 04th February 2022 04:43 PM | Last Updated: 04th February 2022 05:39 PM | A+A A-

ಕಾಲೇಜಿನ ಹೊರಗಡೆ ನಿಂತ ವಿದ್ಯಾರ್ಥಿನಿಯರು
ಕುಂದಾಪುರ: ಹಿಜಾಬ್ ವಿವಾದದಿಂದಾಗಿ ಕಳೆದ ಮೂರು ದಿನಗಳಿಂದ ರಾಷ್ಟ್ರಮಟ್ಟದಲ್ಲಿಯೂ ಸುದ್ದಿಯಾಗುತ್ತಿರುವ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರವೂ ಕೂಡಾ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜ್ ಆವರಣದೊಳಗೆ ಪ್ರವೇಶವನ್ನು ನಿರಾಕರಿಸಲಾಯಿತು.
ಹಿಜಾಬ್ ಧರಿಸಿ ಬಂದವರಿಗೆ ಕಾಲೇಜಿಗೆ ಪ್ರವೇಶ ನೀಡದಂತೆ ರಾಜ್ಯ ಸರ್ಕಾರದ ಆದೇಶದ ಹೊರತಾಗಿಯೂ ತಮ್ಮ ಪೋಷಕರೊಂದಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಕಾಲೇಜಿನ ಗೇಟ್ ಹೊರಗಡೆಯೇ ನಿಲ್ಲಿಸಲಾಯಿತು. ವಿದ್ಯಾರ್ಥಿನಿಯರ ಪೋಷಕರು ಕೂಡಾ ಕಾಲೇಜ್ ಗೇಟ್ ಹೊರಗಡೆ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಸಮವಸ್ತ್ರ ಸಂಹಿತೆ ಕಡ್ಡಾಯ': ಕೇಸರಿ ಶಾಲು, ಹಿಜಾಬ್ ಧರಿಸಲು ಅವಕಾಶ ಇಲ್ಲ: ಕರ್ನಾಟಕ ಸರ್ಕಾರದಿಂದ ಖಡಕ್ ಸೂಚನೆ
ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿಗೆ ಬರುತ್ತಿದ್ದಂತೆಯೇ ಕೆಲ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಲು ಆರಂಭಿಸಿದರು. ಶಾಲು ತೆಗೆದು ಕಾಲೇಜಿನಲ್ಲಿ ತರಗತಿಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಹೇಳಲಾಯಿತು. ಪರಿಸ್ಥಿತಿ ಬಿಗಡಾಯಿಸುವ ಹಿನ್ನೆಲೆಯಲ್ಲಿ ಕಾಲೇಜ್ ಬಳಿಯಲ್ಲಿದ್ದ ಕುಂದಾಪುರ ಠಾಣೆ ಪೊಲೀಸರು, ಸರ್ಕಾರ ಸೂಚನೆಯನ್ನು ಹೇಳಿ ವಿದ್ಯಾರ್ಥಿನಿಯರ ಪೋಷಕರನ್ನು ಗೇಟ್ ಹೊರಗಡೆ ಕಳುಹಿಸಿದರು.
ಆದಾಗ್ಯೂ, ವಿದ್ಯಾರ್ಥಿನಿಯರು ಗೇಟ್ ಬಳಿ ಪ್ರತಿಭಟನೆಯನ್ನು ಮುಂದುವರೆಸಿದರು.ಈ ಮಧ್ಯೆ ಉಡುಪಿ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಕೆಲ ವಿದ್ಯಾರ್ಥಿನಿಯರು, ಈ ಸಮಸ್ಯೆಯನ್ನು ಬಗೆಹರಿಸಿ ಕಾಲೇಜಿನಲ್ಲಿ ಶಿಕ್ಷಣಕ್ಕಾಗಿ ಸೂಕ್ತ ವಾತಾವರಣ ಕಲ್ಪಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಗೆ ಕೋರಿದ್ದಾರೆ.
ಅಂತಿಮ ವರ್ಷದ ಪರೀಕ್ಷೆ ಹತ್ತಿರದಲ್ಲಿದ್ದು, ಪೋಲಿಸರು ಮತ್ತು ಮಾಧ್ಯಮಗಳ ಉಪಸ್ಥಿತಿಯಿಂದ ಕಾಲೇಜಿನಲ್ಲಿ ಬೋಧನಾ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಕಾಲೇಜಿನ ಕೇವಲ ಆರು ವಿದ್ಯಾರ್ಥಿಗಳು ಎತ್ತಿದ್ದ ವಿಷಯನ್ನು ಜಿಲ್ಲಾಡಳಿತ ಕೂಡಲೇ ಬಗೆಹರಿಸಬೇಕಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಉಡುಪಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜನವರಿ ಆರಂಭದಲ್ಲಿ ಈ ವಿವಾದ ಮೊದಲು ಆರಂಭವಾಗಿತ್ತು. ಕಾಲೇಜಿನಲ್ಲಿ ಡ್ರೆಸ್ ಕೋಡ್ ಉಲ್ಲಂಘಿಸಿ ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಿದ್ದರಿಂದ ಈ ವಿವಾದ ಉಂಟಾಗಿತ್ತು.