ರಾಜ್ಯದಲ್ಲಿ ಮೊದಲ ಬಾರಿಗೆ ಸ್ತನ ಕ್ಯಾನ್ಸರ್'ಗೆ 'ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿ' ಚಿಕಿತ್ಸಾ ತಂತ್ರಜ್ಞಾನ!
ಸ್ತನ ಕ್ಯಾನ್ಸರ್ ವಿಕಿರಣ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆ ರಾಜ್ಯದಲ್ಲೇ ಮೊದಲ ಬಾರಿಗೆ 'ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿ'(ಐಓಆರ್‌ಟಿ) ಚಿಕಿತ್ಸಾ ತಂತ್ರಜ್ಞಾನ ಪರಿಚಯಿಸಿದೆ.
Published: 04th February 2022 01:43 PM | Last Updated: 04th February 2022 02:08 PM | A+A A-

ಸುದ್ದಿಗೋಷ್ಠಿಯಲ್ಲಿ ಫೋರ್ಟಿಸ್ ಆಸ್ಪತ್ರೆ ಸರ್ಜಿಕಲ್ ಆಂಕೋಲಜಿ ನಿರ್ದೇಶಕ ಡಾ.ಸಂದೀಪ್ ನಾಯಕ್ ಮಾತನಾಡಿದರು.
ಬೆಂಗಳೂರು: ಸ್ತನ ಕ್ಯಾನ್ಸರ್ ವಿಕಿರಣ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆ ರಾಜ್ಯದಲ್ಲೇ ಮೊದಲ ಬಾರಿಗೆ 'ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿ' (ಐಓಆರ್‌ಟಿ) ಚಿಕಿತ್ಸಾ ತಂತ್ರಜ್ಞಾನ ಪರಿಚಯಿಸಿದೆ.
IORT ಎನ್ನುವುದು ಆಯ್ದ ಕ್ಯಾನ್ಸರ್ ರೋಗಿಗಳಿಗೆ ನೀಡಲಾಗುವ ವಿಕಿರಣದ ಒಂದು ಡೋಸ್ ಚಿಕಿತ್ಸೆಯಾಗಿದೆ, ಈ ಚಿಕಿತ್ಸೆಯನ್ನು ಹೆಚ್ಚಾಗಿ ರೋಗದ ಆರಂಭಿಕ ಹಂತದಲ್ಲಿ ಅಥವಾ ಕಡಿಮೆ ಅಪಾಯ ಸ್ಥಿತಿಯನ್ನು ಎದುರಿಸುತ್ತಿರುವ ರೋಗಿಗಳಿಗೆ ನೀಡಲಾಗುತ್ತಿದೆ. ಸಾಮಾನ್ಯವಾಗಿ ಈ ಚಿಕಿತ್ಸೆಗೆ 30-40 ದಿನಗಳು ಬೇಕಾಗುತ್ತಿತ್ತು. ಆದರೆ, ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿಯಿಂದಾಗಿ ಚಿಕಿತ್ಸೆಯನ್ನು 30-40 ನಿಮಿಷಗಳಲ್ಲಿ ನಡೆಸಬಹುದಾಗಿದೆ.
ಇದನ್ನೂ ಓದಿ: ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪತ್ತೆ ಮಾಡುವ ಪಿಇಟಿ- ಸಿಟಿ ಸ್ಕ್ಯಾನರ್ ಇಲ್ಲ
ಗೆಡ್ಡೆಯನ್ನು ತೆಗೆದ ನಂತರ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕ್ಯಾನ್ಸರ್ಯುಕ್ತ ಗೆಡ್ಡೆಯ ಸ್ಥಳಕ್ಕೆ ಕೇಂದ್ರೀಕೃತ ವಿಕಿರಣವನ್ನು ನೀಡಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಶಸ್ತ್ರಚಿಕಿತ್ಸಾ ಆಂಕೊಲಾಜಿ ನಿರ್ದೇಶಕ ಡಾ ಸಂದೀಪ್ ನಾಯಕ್ ನೇತೃತ್ವದ ವೈದ್ಯರ ತಂಡ, ಇನ್‌ಸ್ಟಿಟ್ಯೂಟ್‌ನಲ್ಲಿನ ವಿಕಿರಣ ಆಂಕೊಲಾಜಿಯ ಸಲಹೆಗಾರರಾದ ಡಾ ನಿಶಾ ವಿಷ್ಣು ಅವರು ಡಿಸೆಂಬರ್ 2021 ರಿಂದ ಜನವರಿ 2022 ರವರೆಗೆ ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಹೊಂದಿರುವ ನಾಲ್ಕು ರೋಗಿಗಳಿಗೆ ಈಗಾಗಲೇ IORT ಚಿಕಿತ್ಸೆ ನೀಡಿದ್ದಾರೆ.
ಚಿಕಿತ್ಸೆ ಪಡೆದ ಮಹಿಳೆಯರು ಪ್ರತಿಕ್ರಿಯೆ ನೀಡಿ, ಶಸ್ತ್ರಚಿಕಿತ್ಸೆ ಬಳಿಕ ಉತ್ತಮವಾಗಿ ಚೇತರಿಸಿಕೊಂಡಿದ್ದು, ಈ ಚಿಕಿತ್ಸೆ ಬಳಿಕ ಮತ್ತೆ ಯಾವುದೇ ರೀತಿಯ ಹೆಚ್ಚುವರಿ ಬಾಹ್ಯ ರೇಡಿಯೋಥೆರಪಿಯ ಅಗತ್ಯವಿರುವುದಿಲ್ಲ ಎಂದು ಹೇಳಿದ್ದಾರೆ.
ಈ ಚಿಕಿತ್ಸೆಯಿಂದ ರೋಗಿಗಳ ಹೆಚ್ಚುವರಿ ಸಮಯವನ್ನು ಉಳಿಸಿದಂತಾಗುತ್ತದೆ ಹಾಗೂ 30-40 ದಿನಗಳ ಚಿಕಿತ್ಸೆ ವೇಳೆ ಎದುರಾಗುವ ಅಡ್ಡಪರಿಣಾಮಗಳನ್ನು ದೂರ ಮಾಡಿದಂತಾಗುತ್ತದೆ ಎಂದು ವೈದ್ಯ ಡಾ.ಸಂದೀಪ್ ನಾಯಕ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ಥೆರಪಿ: ಆರಂಭಿಕ ಹಂತದಲ್ಲೇ ಟ್ಯೂಮರ್ ಪತ್ತೆ ಹಚ್ಚುವ ವಿಧಾನ; ಸಂಶೋಧಕರ ಸಾಧನೆ
ಸ್ತನ ಕ್ಯಾನ್ಸರ್ ಭಾರತ ಮತ್ತು ಪ್ರಪಂಚದಲ್ಲಿ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ. ದೀರ್ಘಾವಧಿಯ ರೇಡಿಯೊಥೆರಪಿಯಿಂದ ದೂರ ಉಳಿಯುವ ಸಲುವಾಗಿ ಸಾಕಷ್ಟು ರೋಗಿಗಳು ಸಂಪೂರ್ಣ ಸ್ತನವನ್ನೇ ತೆಗೆದು ಹಾಕಿಸಿಕೊಳ್ಳುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಇಂತಹ ರೋಗಿಗಳಿಗೆ ಸಹಾಯಕವಾಗಲು ನಾವು IORT ಚಿಕಿತ್ಸೆಯನ್ನು ಅಳವಡಿಸಿಕೊಂಡಿದ್ದೇವೆ. ಇದರ ಮೂಲಕ ರೋಗಿಗಳಿಗೆ ಕೇವಲ 30 ನಿಮಿಷಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಡಾ.ವಿಷ್ಣು ಅವರು ಮಾತನಾಡಿ, ಈ ಚಿಕಿತ್ಸೆ ನೀಡಲು ವಿಕಿರಣ ಆಂಕೊಲಾಜಿಸ್ಟ್‌ಗಳು ಮತ್ತು ಶಸ್ತ್ರಚಿಕಿತ್ಸಕರು ಒಂದು ದಿನದಲ್ಲಿ ವಿಕಿರಣ ಚಿಕಿತ್ಸೆಯ ಸಂಪೂರ್ಣ ಕೋರ್ಸ್ ಅನ್ನು ನೀಡಲು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ರೋಗಿಯು ಅರಿವಳಿಕೆಗೆ ಒಳಗಾಗಿರುವಾಗ, ಗೆಡ್ಡೆಯನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದು, ಗಡ್ಡೆ ಇದ್ದ ಸ್ಥಳಕ್ಕೆ ಕೇಂದ್ರೀಕೃತ ವಿಕಿರಣವನ್ನು ನೀಡಲಾಗುತ್ತದೆ. ಇದು ದೇಹದ ಹತ್ತಿರದ ಪ್ರದೇಶಗಳಲ್ಲಿ ಆರೋಗ್ಯಕರ ಅಂಗಾಂಶಗಳಿಗೆ ಹಾನಿಯಾಗುವ ಅಪಾಯವನ್ನೂ ಕಡಿಮೆ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.