ಚಿಕ್ಕಮಗಳೂರು: ದಲಿತ ಯುವತಿಯೊಂದಿಗೆ ವ್ಯಕ್ತಿ ವಿವಾಹ, ಸ್ವಜಾತಿಯವರಿಂದಲೇ ಕುಟುಂಬಕ್ಕೆ ಬಹಿಷ್ಕಾರ
ವ್ಯಕ್ತಿಯೊಬ್ಬರು ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ ಸ್ವಜಾತಿಯವರೇ ಬಹಿಷ್ಕಾರ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
Published: 05th February 2022 09:46 AM | Last Updated: 05th February 2022 02:48 PM | A+A A-

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ವ್ಯಕ್ತಿಯೊಬ್ಬರು ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ ಸ್ವಜಾತಿಯವರೇ ಬಹಿಷ್ಕಾರ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲಿಂಗದಹಳ್ಳಿ ಗ್ರಾಮದ ಸೋಮಶೇಖರ್ ಕುಟುಂಬಕ್ಕೆ ಸ್ವಜಾತಿ ಮುಖಂಡರು ಬಹಿಷ್ಕಾರ ಹಾಕಿದ್ದಾರೆ. ವ್ಯಕ್ತಿಯು ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ದಲಿತ ಯುವತಿಯನ್ನು ಮದುವೆಯಾಗಿದಕ್ಕೆ ಈ ದಂಪತಿಯ ಜೊತೆ ಗ್ರಾಮದಲ್ಲಿ ಯಾರು ಮಾತನಾಡುವಂತಿರಲಿಲ್ಲ. ಹಾಗೇನಾದರೂ ಅವರ ಜೊತೆ ಯಾರಾದರೂ ಮಾತನಾಡಿದ್ದಲ್ಲಿ 5 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಬಹಿಷ್ಕಾರ ಹಾಕಿದ್ದಾರೆ.
ಸೋಮಶೇಖರ್, ಮೂಲತಃ ಉಪ್ಪಾರ ಜನಾಂಗಕ್ಕೆ ಸೇರಿರುವ ವ್ಯಕ್ತಿ. ತಾನು ಪ್ರೀತಿಸಿದ ದಲಿತ ಯುವತಿಯನ್ನು ಮದುವೆಯಾಗಿದ್ದಾರೆ. ಕೆಂಡಮಂಡಲವಾಗಿರುವ ಸ್ವಜಾತಿಯ ಮುಖಂಡರು ಈ ಕುಟುಂಬದವರಿಗೆ ಬಹಿಷ್ಕಾರ ಹಾಕಿದ್ದಾರೆ. ಊರಲ್ಲಿ ನೆಮ್ಮದಿಯಾಗಿ ತಮ್ಮ ಪಾಡಿಗೆ ತಾವು ಜೀವನ ಮಾಡಿಕೊಂಡು ಇರಲು ಬಿಡುತ್ತಿಲ್ಲ.
ಊರಿನ ದೇವಾಲಯಕ್ಕೆ ಪ್ರವೇಶವನ್ನು ಕೊಡುತ್ತಿಲ್ಲ. ಯಾರೂ ಕೂಡ ಇವರನ್ನು ಯಾವುದೇ ಕಾರ್ಯಕ್ರಮಕ್ಕೂ ಕರೆಯಬಾರದು ಅಂತಾ ಆದೇಶ ಹೊರಡಿಸಿದ್ದಾರೆ. ಬಹಿಷ್ಕಾರಗೊಂಡಿರುವ ಈ ಕುಟುಂಬದವರನ್ನು ಮಾತನಾಡಿಸಿದರೂ 5 ಸಾವಿರ ರೂ. ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರಂತೆ. ಇದರಿಂದ ಮಾನಸಿಕವಾಗಿ ನೊಂದಿರುವ ಸೋಮಶೇಖರ್ ಕುಟುಂಬ, ನ್ಯಾಯ ಕೊಡಿಸುವಂತೆ ಜಿಲ್ಲಾಡಳಿತದ ಮೊರೆ ಹೋಗಿದೆ.
ಗುರುವಾರ ಬಹಿಷ್ಕಾರಗೊಂಡಿರುವ ಸೋಮಶೇಖರ್, ಬಜರಂಗದಳ ಮುಖಂಡ ತುಡುಕೂರು ಮಂಜು ಅವರೊಂದಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರನ್ನು ಭೇಟಿ ಮಾಡಿ ನ್ಯಾಯ ಕೋರಿ ಮನವಿ ಸಲ್ಲಿಸಿದರು.