ರಾಜ್ಯ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ: ಸೋಮವಾರ ದೆಹಲಿಗೆ ಸಿಎಂ ಬೊಮ್ಮಾಯಿ, ಹೆಚ್ಚಿದ ಕುತೂಹಲ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಅವರು ಸೋಮವಾರ ದೆಹಲಿಗೆ ತೆರಳಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಯಾಗುವ ಕುರಿತು ಎಲ್ಲರ ಕಣ್ಣು ಬಿಜೆಪಿ ಕೇಂದ್ರ ನಾಯಕತ್ವದತ್ತ ನೆಟ್ಟಿದೆ.
Published: 06th February 2022 08:25 AM | Last Updated: 06th February 2022 08:25 AM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಅವರು ಸೋಮವಾರ ದೆಹಲಿಗೆ ತೆರಳಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಯಾಗುವ ಕುರಿತು ಎಲ್ಲರ ಕಣ್ಣು ಬಿಜೆಪಿ ಕೇಂದ್ರ ನಾಯಕತ್ವದತ್ತ ನೆಟ್ಟಿದೆ.
ಸೋಮವಾರ ಬೆಳಿಗ್ಗೆ 9.40ರ ಸುಮಾರಿಗೆ ದೆಹಲಿ ತಲುಪುವ ಸಿಎಂ ಬೊಮ್ಮಾಯಿ, ಕೇಂದ್ರದ ಕೆಲವು ಸಚಿವರನ್ನು ಭೇಟಿಮಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ರಾಜ್ಯದ ಎಲ್ಲ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರ ಜತೆ ಸಭೆ ನಡೆಸುವರು. ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ರಾಜ್ಯದ ಸಂಸದರೂ ಈ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಮುಖ್ಯಮಂತ್ರಿಯವರ ಸಚಿವಾಲಯ ತಿಳಿಸಿದೆ.
ಸಂಸದರ ಜತೆ ಸಭೆ ಮುಗಿಸಿದ ಬಳಿಕ ಮುಖ್ಯಮಂತ್ರಿಯವರು ದೆಹಲಿಯ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡುವರು. ಅಂತರರಾಜ್ಯ ಜಲ ವಿವಾದಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ವಕೀಲರ ತಂಡದ ಜತೆ ಬೊಮ್ಮಾಯಿ ಮಂಗಳವಾರ ಬೆಳಿಗ್ಗೆ ಸಭೆ ನಡೆಸುವರು. ಬಳಿಕ ಕೇಂದ್ರದ ಸಚಿವರನ್ನು ಭೇಟಿ ಮಾಡುವರು. ದೆಹಲಿಯಿಂದ ಹಿಂದಿರುಗುವ ಸಮಯ ಇನ್ನೂ ನಿಗದಿಯಾಗಿಲ್ಲ ಎಂದು ತಿಳಿದುಬಂದಿದೆ.
ಈ ನಡುವಲ್ಲೇ ಮುಖ್ಯಮಂತ್ರಿಗಳ ದೆಹಲಿ ಭೇಟಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಕುತೂಹಲಗಳನ್ನು ಸೃಷ್ಟಿಸಿದೆ. ರಾಜ್ಯದಲ್ಲಿ ಖಾಲಿ ಇರುವ ನಾಲ್ಕು ಸಚಿವ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆಯೇ ಅಥವಾ ಕೆಲವು ಕಾರ್ಯನಿರ್ವಹಿಸದ ಸಚಿವರ ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡಿ ಸಂಪುಟ ಪುನಾರಚನೆ ಮಾಡಲಾಗುತ್ತದೆಯೇ ಎಂಬುದರ ಕುರಿತು ಊಹಾಪೋಹಗಳು ಶುರುವಾಗಿವೆ.
ಈಗಾಗಲೇ ಬಿಜೆಪಿಯ ಕೇಂದ್ರ ನಾಯಕರು ಐದು ರಾಜ್ಯಗಳಲ್ಲಿನ ಚುನಾವಣಾ ಪ್ರಚಾರದಲ್ಲಿ ಕಾರ್ಯನಿರತರಾಗಿದ್ದು, ಮುಖ್ಯಮಂತ್ರಿಗಳ ಭೇಟಿಯ ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಸಿಎಂ ಬೊಮ್ಮಾಯಿ ಅವರು ಬುಧವಾರ ಸಂಪುಟ ಸಭೆ ನಡೆಸಲಿದ್ದು, ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆಯಿದೆ.
ವಿಜಯಪುರ ನಗರ ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇತ್ತೀಚೆಗೆ ಸಚಿವ ಸಂಪುಟದಲ್ಲಿ ಪ್ರಮುಖ ಬದಲಾವಣೆಗಳ ಸುಳಿವು ನೀಡಿದ್ದರು. ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಯುಗ ಅಂತ್ಯಗೊಂಡಿದ್ದು, ಕರ್ನಾಟಕದಲ್ಲಿ ಎರಡನೇ ಹಂತದ ನಾಯಕತ್ವವನ್ನು ಬೆಳೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.
ಏತನ್ಮಧ್ಯೆ, ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿದ ಹಿನ್ನೆಲೆಯಲ್ಲಿ ಮಾಜಿ ಜಲಸಂಪನ್ಮೂಲ ಸಚಿವ ಮತ್ತು ಶಾಸಕ ರಮೇಶ್ ಜಾರಕಿಹೊಳಿ ಅವರ ಆಪ್ತ ಸಹಾಯಕರು ಮತ್ತು ಬೆಂಬಲಿಗರು ಸಂಸತ ವ್ಯಕ್ತಪಡಿಸುತ್ತಿದ್ದಾರೆ. ಈ ಬೆಳವಣಿಗೆಯು ರಮೇಶ್ ಜಾರಕಿಹೊಳಿಯವರು ಮರಳಿ ಸಂಪುಟ ಸಹಾಯಕವಾಗಿದೆ ಎಂದು ಹೇಳುತ್ತಿದ್ದಾರೆ. ರಮೇಶ್ ಜಾರಕಿಹೊಳಿಯವರು ಕೆಲವರ ಸಂಚಿಗೆ ಬಲಿಪಶು ಆಗಿದ್ದರು ಎಂದು ಹೇಳಿದ್ದಾರೆ.
ಆದಾಗ್ಯೂ, ಪೊಲೀಸರ ಬಿ-ರಿಪೋರ್ಟ್ ಸಲ್ಲಿಕೆಯಿಂದ ಜಾರಕಿಹೊಳಿಯವರು ಮರಳಿ ಸಂಪುಟ ಸೇರುವುದು ಅಷ್ಟು ಸುಲಭವಾಗಿಲ್ಲ ಎಂದು ಅವರ ವಿರುದ್ಧವಿರುವ ಕೆಲ ನಾಯಕರು ಹೇಳಿದ್ದಾರೆ.
ಪೊಲೀಸರು ಸಲ್ಲಿಸುವ ಎಲ್ಲಾ ಬಿ ರಿಪೋರ್ಟ್ ಗಳನ್ನು ನ್ಯಾಯಾಲಯ ಅಂಗೀಕರಿಸುವುದಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿ ಮಾಜಿ ಸಚಿವರಾಗಿದ್ದು, ನ್ಯಾಯಾಲಯದ ತೀರ್ಪಿಗಾಗಿ ಕಾದುನೋಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.