ಕೊಡಗಿಗೂ ವ್ಯಾಪಿಸಿದ ಹಿಜಾಬ್ ವಿವಾದ: ಕೇಸರಿ ಶಾಲು ಧರಿಸಿ ಕಾಲೇಜ್ ಗೆ ಬಂದ ವಿದ್ಯಾರ್ಥಿಗಳು
ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಹಿಜಾಬ್ ವಿವಾದ ಇದೀಗ ಕೊಡಗಿನ ಕಾಲೇಜುಗಳಿಗೂ ವ್ಯಾಪಿಸಿದ್ದು, ಮಡಿಕೇರಿ ಮತ್ತು ಶನಿವಾರಸಂತೆ ಕಾಲೇಜುಗಳಲ್ಲಿ ಹಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜು...
Published: 07th February 2022 07:02 PM | Last Updated: 07th February 2022 07:02 PM | A+A A-

ಕೆಎಂ ಕರಿಯಪ್ಪ ಕಾಲೇಜಿನ ವಿದ್ಯಾರ್ಥಿಗಳು
ಮಡಿಕೇರಿ: ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಹಿಜಾಬ್ ವಿವಾದ ಇದೀಗ ಕೊಡಗಿನ ಕಾಲೇಜುಗಳಿಗೂ ವ್ಯಾಪಿಸಿದ್ದು, ಮಡಿಕೇರಿ ಮತ್ತು ಶನಿವಾರಸಂತೆ ಕಾಲೇಜುಗಳಲ್ಲಿ ಹಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜು ಆವರಣದಲ್ಲಿ ಹಿಜಾಬ್ ನಿಷೇಧಿಸುವಂತೆ ಒತ್ತಾಯಿಸಿದರು.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆಎಂ ಕರಿಯಪ್ಪ ಕಾಲೇಜಿನಲ್ಲಿ ಸೋಮವಾರ ವಿದ್ಯಾರ್ಥಿಗಳ ಗುಂಪೊಂದು ಕೇಸರಿ ಶಾಲು ಧರಿಸಿ ತರಗತಿಗೆ ಆಗಮಿಸಿತು. ಆದರೆ, ಅವರನ್ನು ಗೇಟ್ ಬಳಿ ನಿಲ್ಲಿಸಲಾಯಿತು.
ಇದನ್ನು ಓದಿ: 10 ಜಿಲ್ಲೆಗಳಿಗೆ ವ್ಯಾಪಿಸಿದ ಹಿಜಾಬ್ v/s ಕೇಸರಿ ವಿವಾದದ ಕಿಚ್ಚು: ಬೋಧಕ ವರ್ಗ ಹೈರಾಣ; ರಾಜಕೀಯ ಬಣ್ಣ ಲೇಪನ
ಏತನ್ಮಧ್ಯೆ, ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಿದ ಬಗ್ಗೆ ವಿರೋಧ ವ್ಯಕ್ತಪಡಿಸಿದರ ಈ ವಿದ್ಯಾರ್ಥಿಗಳು, ತಮಗೂ ತರಗತಿಗಳಿಗೆ ಹಾಜರಾಗಲು ಅನುಮತಿಸಬೇಕೆಂದು ಒತ್ತಾಯಿಸಿದರು.
ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಎಫ್ಎಂಕೆಎಂಸಿ ಪ್ರಾಂಶುಪಾಲ ಜಗತ್ ತಿಮ್ಮಯ್ಯ ಅವರು, ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ ಇನ್ನೂ ಸಮವಸ್ತ್ರ ವಿತರಿಸಿಲ್ಲ. ಸಮವಸ್ತ್ರ ವಿತರಣೆಯ ನಂತರ ಒಂದು ವಾರದಲ್ಲಿ ತರಗತಿಗಳ ಒಳಗೆ ಎಲ್ಲರಿಗೂ ಒಂದೇ ರೀತಿಯ ಸಮವಸ್ತ್ರ ಜಾರಿಗೆ ತರಲಾಗುವುದು ಎಂದು ಹೇಳಿದರು.
ಮತ್ತೊಂದು ಘಟನೆಯಲ್ಲಿ ಶನಿವಾರಸಂತೆಯಲ್ಲಿ ಭಾರತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕೇಸರಿ ಶಾಲು ಮತ್ತು ಹಿಜಾಬ್ ಧರಿಸಿ ಕಾಲೇಜು ಆವರಣ ಪ್ರವೇಶಿಸಲು ಯತ್ನಿಸಿದ್ದಾರೆ. ಆದರೆ, ಅವರನ್ನು ಕಾಲೇಜು ಪ್ರವೇಶಿಸದಂತೆ ಆಡಳಿತ ಮಂಡಳಿ ತಡೆದಿತ್ತು.
ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಗಲಾಟೆ ತಪ್ಪಿಸಲು ಶನಿವಾರಸಂತೆ ಕಾಲೇಜ್ ಗೆ ಆಗಮಿಸಿದರು. ಇನ್ಸ್ಪೆಕ್ಟರ್ ಪರಶಿವಮೂರ್ತಿ ಅವರು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶಾಲು, ಹಿಜಾಬ್ ಧರಿಸದಂತೆ ಮನವೊಲಿಸಿದರು. ಮನವಿಯನ್ನು ಸ್ವೀಕರಿಸಿದ ವಿದ್ಯಾರ್ಥಿಗಳು ನಂತರ ಕಾಲೇಜು ಆವರಣವನ್ನು ಪ್ರವೇಶಿಸಿದರು.