ವಿದ್ಯಾರ್ಥಿನಿಯರನ್ನು ರಸ್ತೆಯಲ್ಲಿ ನಿಲ್ಲಿಸಲು ನಮ್ಮದು ಪಾಕಿಸ್ತಾನವಲ್ಲ, ಸೌಜನ್ಯತೆಯ ಆಧಾರದ ಮೇಲೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ: ಸಚಿವ ಬಿಸಿ ನಾಗೇಶ್
ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಮುಸ್ಲಿಂ ಬಾಲಕಿಯರಿಗೆ ಪ್ರತ್ಯೇಕ ಕೊಠಡಿಯಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ವಿರೋಧಗಳು ಎದುರಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನೀಡಿದ್ದಾರೆ.
Published: 08th February 2022 09:11 AM | Last Updated: 08th February 2022 01:32 PM | A+A A-

ಬಿಸಿ ನಾಗೇಶ್
ಬೆಂಗಳೂರು/ಮೈಸೂರು: ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಮುಸ್ಲಿಂ ಬಾಲಕಿಯರಿಗೆ ಪ್ರತ್ಯೇಕ ಕೊಠಡಿಯಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ವಿರೋಧಗಳು ಎದುರಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು, ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ರಸ್ತೆಯಲ್ಲಿ ನಿಲ್ಲುವುದು ಬೇಡವೆಂದು ಸೌಜನ್ಯತೆಯ ಆಧಾರದ ಮೇಲೆ ಕೊಠಡಿಯಲ್ಲಿ ಕೂರಿಸಲಾಗಿದೆ. ಅಲ್ಲಿ ಯಾವ ತರಗತಿಗಳೂ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಧರಿಸಿ ಬಂದವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ. ಆ ಕೊಠಡಿಯಲ್ಲಿ ಯಾವ ತರಗತಿಗಳು ನಡೆಯುತ್ತಿಲ್ಲ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ರಸ್ತೆಯಲ್ಲಿ ನಿಲ್ಲುವುದು ಬೇಡವೆಂದು ಕೊಠಡಿಯಲ್ಲಿ ಕೂರಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಹಿಜಾಬ್ ವಿವಾದ: 2023ರ ಚುನಾವಣೆಗೆ ರಾಜಕೀಯ ಪಕ್ಷಗಳು ಲಾಭ ಪಡೆದುಕೊಳ್ಳುತ್ತಿವೆ- ಮಾಜಿ ಪ್ರಧಾನಿ ದೇವೇಗೌಡ
ವಿದ್ಯಾರ್ಥಿನಿಯರನ್ನು ರಸ್ತೆಯಲ್ಲಿ ನಿಲ್ಲಿಸಲು ಇದು ಪಾಕಿಸ್ತಾನ ಅಲ್ಲ. ಅವರು ನಮ್ಮ ಮಕ್ಕಳು. ಅವರು ತುಂಬಾ ಮುಗ್ಧತೆ ಇರುವ ಹೆಣ್ಣುಮಕ್ಕಳು. ಅವರ ಮುಗ್ಧತೆಯನ್ನ ಕೆಲ ರಾಜಕಾರಣಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮುಗ್ಧ ವಿದ್ಯಾರ್ಥಿನಿಯರಿಗೆ ಶಾಲೆ ಒಳಗೆ ಕೊಠಡಿಯಲ್ಲಿ ಕೂರಿಸಿ ಬುದ್ಧಿ ಹೇಳುತ್ತೇವೆ ಎಂದು ತಿಳಿಸಿದರು.
‘ಇದು ಧರ್ಮದ ಶಿಕ್ಷಣವಲ್ಲ. ಇದನ್ನ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಅರ್ಥ ಮಾಡಿಕೊಳ್ಳಬೇಕು. ನಾಳೆಯ ನ್ಯಾಯಾಲಯದ ಆದೇಶವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಅದರ ಆಧಾರದ ಮೇಲೆ ಶಿಕ್ಷಣ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ. ಪಾಠ ಬೇಕಾದರೆ ಸಮವಸ್ತ್ರ ಧರಿಸಿಯೇ ಶಾಲೆಗೆ ಬರಬೇಕು. ಶಾಲಾ ಆವರಣದ ಗೇಟ್ವರೆಗೂ ಹಿಜಾಬ್ ಧರಿಸಿ ಬನ್ನಿ, ನಮ್ಮ ತಕರಾರಿಲ್ಲ’ ಆದರೆ, ತರಗತಿಗಳ ಒಳಗೆ, ಸಮವಸ್ತ್ರ ಹೊರತುಪಡಿಸಿ ಹಿಜಾಬ್ ಆಗಲೀ ಕೇಸರಿ ಶಾಲಿಗಾಗಲೀ ಅನುಮತಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಈ ನಡುವೆ ಮೈಸೂರಿಗೆ ಭೇಟಿ ನೀಡಿದ್ದ ಸಚಿವರಿಗೆ ಹಲವು ಕಾರ್ಯಕರ್ತರು ಘೇರಾವ್ ಹಾಕಲು ಯತ್ನ ನಡೆಸಿದ ಘಟನೆ ಕೂಡ ನಡೆಯಿತು.