ಹಿಜಾಬ್- ಕೇಸರಿ ಶಾಲು ವಿವಾದ: ಶಿವಮೊಗ್ಗದಲ್ಲಿ ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ
ಶಿವಮೊಗ್ಗದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿಜಾಬ್ – ಕೇಸರಿ ಹೋರಾಟದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿದ್ದು, ಕಲ್ಲು ತೂರಾಟ ನಡೆದ ಹಿನ್ನಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
Published: 08th February 2022 03:10 PM | Last Updated: 08th February 2022 04:56 PM | A+A A-

ವಿದ್ಯಾರ್ಥಿಗಳ ಪ್ರತಿಭಟನೆ
ಶಿವಮೊಗ್ಗ: ಶಿವಮೊಗ್ಗದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿಜಾಬ್ – ಕೇಸರಿ ಹೋರಾಟದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿದ್ದು, ಕಲ್ಲು ತೂರಾಟ ನಡೆದ ಹಿನ್ನಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಎರಡು ದಿನಗಳ ಕಾಲ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಎನ್.ಜೆ. ನಾಗರಾಜ್ ಆದೇಶಿಸಿದ್ದಾರೆ.
ತೀವ್ರ ಸ್ವರೂಪ ಪಡೆದುಕೊಂಡ ವಿದ್ಯಾರ್ಥಿಗಳ ಪ್ರತಿಭಟನೆ
ಇನ್ನು ಶಿವಮೊಗ್ಗದಲ್ಲಿ ಹಿಜಾಬ್ ಪರ-ವಿರೋಧ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿದ್ಯಾರ್ಥಿಗಳು ಪ್ರತಿಭಟನೆಯ ವೇಳೆ ಪರಸ್ಪರ ಕಲ್ಲು-ತೂರಾಟ ಮಾಡುತ್ತಿದ್ದು, ಇದನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಯೋಗಿಸಿದ್ದಾರೆ. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎನ್.ಜೆ.ನಾಗರಾಜ್ ನಗರದಲ್ಲಿ 2 ದಿನಗಳ ಕಾಲ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ: ಬಾಗಲಕೋಟೆ, ಶಿವಮೊಗ್ಗದಲ್ಲಿ ಕಲ್ಲು ತೂರಾಟ; ವಿವಿಧೆಡೆ ಪರಿಸ್ಥಿತಿ ಉದ್ವಿಗ್ನ!
ಪ್ರತಿಭಟನೆ ಹೆಚ್ಚುತ್ತಿರುವ ಕಾರಣ ಈಗಾಗಲೇ ಶಾಲಾ- ಕಾಲೇಜುಗಳಿಗೆ ರಜೆ ಸಹ ಘೋಷಣೆ ಮಾಡಲಾಗಿದೆ.
ಇಬ್ಬರು ವಿದ್ಯಾರ್ಥಿಗಳಿಗೆ ಗಾಯ
ಇನ್ನು ಇಂದಿನ ಪ್ರತಿಭಟನೆಯಲ್ಲಿ ಕನಿಷ್ಠ ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಪ್ರಸ್ತುತ ಉನ್ನತ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಬಿಎಂ ಲಕ್ಷ್ಮೀ ಪ್ರಸಾದ್ ಧರಣಿ ನಿರತ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಯತ್ನಿಸಿದರು. ಬುಧವಾರ ತರಗತಿ ಆರಂಭಿಸುವ ಕುರಿತು ಜಿಲ್ಲಾಧಿಕಾರಿ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.