ಮೊಸಳೆ ದಾಳಿಗೆ ಮೂರನೇ ಬಲಿ: ಎಚ್ಚೆತ್ತ ಅರಣ್ಯ ಇಲಾಖೆಯಿಂದ ಕಾಳಿ ನದಿ ಪ್ರವೇಶಕ್ಕೆ ನಿರ್ಬಂಧ
ಳೆದ ಮೂರು ತಿಂಗಳಲ್ಲಿ ದಾಂಡೇಲಿ ಸುತ್ತಮುತ್ತಲಿನ ಕಾಳಿ ನದಿ ದಂಡೆಯಲ್ಲಿ ಮೊಸಳೆ ದಾಳಿಗೆ ಮೂರು ಮಂದಿ ಸಾವನ್ನಪ್ಪಿದ್ದಾರೆ. ದಾಂಡೇಲಿ ಪಟ್ಟಣದ ಮೂಲಕ ಹಾದುಹೋಗುವ ಕಾಳಿ ನದಿಯಲ್ಲಿ ಮೊಸಳೆ ದಾಳಿಗಳು ಹೆಚ್ಚಾಗಿದ್ದು ಪ್ರಾಣಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕಾಳಿ ನದಿಗೆ ಇಳಿಯದಂತೆ ನಿರ್ಬಂಧ ವಿಧಿಸಲಾಗಿದೆ.
Published: 09th February 2022 04:07 PM | Last Updated: 09th February 2022 05:03 PM | A+A A-

ಮೊಸಳೆ ದಾಳಿಗೆ ಬಲಿಯಾದ ಯುವಕ
ಹುಬ್ಬಳ್ಳಿ: ಕಳೆದ ಮೂರು ತಿಂಗಳಲ್ಲಿ ದಾಂಡೇಲಿ ಸುತ್ತಮುತ್ತಲಿನ ಕಾಳಿ ನದಿ ದಂಡೆಯಲ್ಲಿ ಮೊಸಳೆ ದಾಳಿಗೆ ಮೂರು ಮಂದಿ ಸಾವನ್ನಪ್ಪಿದ್ದಾರೆ. ದಾಂಡೇಲಿ ಪಟ್ಟಣದ ಮೂಲಕ ಹಾದುಹೋಗುವ ಕಾಳಿ ನದಿಯಲ್ಲಿ ಮೊಸಳೆ ದಾಳಿಗಳು ಹೆಚ್ಚಾಗಿದ್ದು ಪ್ರಾಣಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕಾಳಿ ನದಿಗೆ ಇಳಿಯದಂತೆ ನಿರ್ಬಂಧ ವಿಧಿಸಲಾಗಿದೆ.
ದಾಂಡೇಲಿಯಲ್ಲಿ ಮೊಸಳೆ ದಾಳಿಗೆ ಬಲಿಯಾಗಿದ್ದ 24 ವರ್ಷದ ಹರ್ಷದ್ ಖಾನ್ ಯುವಕನ ಮೃತದೇಹವನ್ನು ಮಂಗಳವಾರ ತಡರಾತ್ರಿ ರಕ್ಷಣಾ ತಂಡ ಪತ್ತೆ ಮಾಡಿದೆ. ಮೊಸಳೆ ಯುವಕನ ದೇಹವನ್ನು ಒಂದು ಮೈಲಿ ಅಪ್‌ಸ್ಟ್ರೀಮ್‌ಗೆ ಎಳೆದೊಯ್ದಿತ್ತು. ಹೀಗಾಗಿ ಅವಶೇಷಗಳನ್ನು ಪತ್ತೆಹಚ್ಚಲು ಎರಡು ದಿನ ಬೇಕಾಗಿತ್ತು.
ಆಡಳಿತ ಮತ್ತು ಅರಣ್ಯ ಇಲಾಖೆಯು ಮೊಸಳೆ ದಾಳಿಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಂಡಿದ್ದು, ಕಾಳಿ ನದಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದೆ. ದಾಂಡೇಲಿಯ ಪ್ರವಾಸಿಗರು ಮತ್ತು ಅನಿವಾಸಿಗಳು ನದಿಗೆ ಹೋಗದಂತೆ ನದಿಯ ಪ್ರವೇಶ ದ್ವಾರಗಳನ್ನು ಮುಚ್ಚಲು ಇಲಾಖೆ ಈಗ ಯೋಜಿಸುತ್ತಿದೆ.
ಇದನ್ನೂ ಓದಿ: ಡಾಂಡೇಲಿ: ಕಾಳಿ ನದಿಯಲ್ಲಿ ಸ್ನಾನಕ್ಕೆ ಇಳಿದ ಯುವಕನನ್ನು ನೀರಿನೊಳಗೆ ಎಳೆದೊಯ್ದ ಮೊಸಳೆ!
ಕಳೆದ ಕೆಲವು ತಿಂಗಳುಗಳಲ್ಲಿ ಮೊಸಳೆ ದಾಳಿಯಿಂದ ವರದಿಯಾದ ಮೂರು ಸಾವುಗಳಲ್ಲಿ, ಇಬ್ಬರು ಹೊರಗಿನವರು ನದಿ ತೀರದಲ್ಲಿ ಮೊಸಳೆಗಳ ಇರುವ ಬಗ್ಗೆ ತಿಳಿದಿರಲಿಲ್ಲ. ಸುಪಾ ಅಣೆಕಟ್ಟಿನಿಂದ ಮೇಲ್ದಂಡೆಯಿಂದ ನೀರು ಬಿಡುವುದನ್ನು ಹಲವು ಬಾರಿ ನಿಲ್ಲಿಸಿದಾಗ, ಕಾಳಿ ನದಿಯಲ್ಲಿನ ಬಂಡೆಗಳ ಮೇಲೆ ಮೊಸಳೆಗಳು ಬಿಸಿಲಿಗೆ ಮೈಯೊಡ್ಡುತ್ತಿದದ್ದನ್ನು ಕಾಣಬಹುದಾಗಿತ್ತು. ಇನ್ನು ಕಳೆದ ಕೆಲ ತಿಂಗಳಿಂದ ದಾಂಡೇಲಿ ಬಳಿಯ ಕಾಳಿ ತೀರವನ್ನು ಆಕ್ರಮಿಸಿಕೊಂಡಿರುವ ನೀರಿನ ಯೋಜನೆ ಮೊಸಳೆಗಳನ್ನು ದೂರ ಹೋಗುವಂತೆ ಮಾಡುತ್ತಿವೆ. ಅವುಗಳ ನಿಯಮಿತ ಗೂಡುಕಟ್ಟುವ ಆವಾಸಸ್ಥಾನಗಳು ನಾಶವಾಗುತ್ತಿರುವುದರಿಂದ ಮೊಸಳೆಗಳು ಮಾನವ ವಾಸಸ್ಥಾನಗಳಿಗೆ ಹತ್ತಿರವಾಗುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ದಾಂಡೇಲಿ ಕ್ರೊಕೋಡೈಲ್ ರಾಂಪ್ ಶೀಘ್ರವೇ ಪ್ರವಾಸಿಗರಿಗೆ ಮುಕ್ತ!
ದಾಂಡೇಲಿಯ ವನ್ಯಜೀವಿ ಸಂರಕ್ಷಣಾಧಿಕಾರಿ ರಾಹುಲ್ ಬಾವಾಜಿ ಮಾತನಾಡಿ, ನೀರಿನ ಯೋಜನೆ ಮತ್ತು ಕೋಳಿ ತ್ಯಾಜ್ಯ ಎಸೆಯುವುದು ಇತ್ತೀಚಿನ ವಾರಗಳಲ್ಲಿ ಮೊಸಳೆಗಳು ಹೆಚ್ಚಾಗಿ ನದಿ ದಡಕ್ಕೆ ಬರಲು ಪ್ರಮುಖ ಕಾರಣವಾಗಿದೆ. ಮೊಸಳೆ ಉದ್ಯಾನವನದಲ್ಲಿ ವೀಕ್ಷಣಾ ರ‍್ಯಾಂಪ್ ನಿರ್ಮಾಣ ಮಾಡಿರುವುದರಿಂದ ಈ ಮೊಸಳೆಗಳ ಗೂಡುಕಟ್ಟುವ ಸ್ಥಳವೂ ನಾಶವಾಗಿದ್ದು, ಹಳೆ ದಾಂಡೇಲಿ ಮತ್ತು ದಾಂಡೇಲಪ್ಪ ದೇವಸ್ಥಾನದ ಮಧ್ಯೆ ನದಿ ಸೇರುವುದು ಅಪಾಯಕಾರಿಯಾಗಿದೆ ಎಂದರು.
ಮೊಸಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ನದಿಗೆ ಜನರು ಪ್ರವೇಶಿಸದಂತೆ ಕ್ರಮಕೈಗೊಳ್ಳಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ದಾಂಡೇಲಿಯ ಕಾಳಿ ನದಿ ದಂಡೆಯಲ್ಲಿ ಎಚ್ಚರಿಕೆ ಫಲಕಗಳು ಮತ್ತು ಜಾಲರಿಗಳನ್ನು ಹಾಕಲಾಗುವುದು ಮತ್ತು ಸಂಘರ್ಷವನ್ನು ತಗ್ಗಿಸಲು ಕಾವಲುಗಾರರನ್ನು ನೇಮಿಸಲಾಗುವುದು ಎಂದರು.