ಮಂಡ್ಯದಲ್ಲಿ 'ಜೈ ಶ್ರೀರಾಮ್' ಎಂದ ಹುಡುಗರೆದುರು ಸಿಟ್ಟಿಗೆದ್ದು 'ಅಲ್ಲಾ ಹು ಅಕ್ಬರ್' ಎಂದ ವಿದ್ಯಾರ್ಥಿನಿ!
ಹಿಜಾಬ್-ಕೇಸರಿ ಶಾಲು ಕಿಚ್ಚು ಉಡುಪಿಯಿಂದ ಆರಂಭವಾಗಿ ಇದೀಗ ರಾಜ್ಯದಲ್ಲೆಡೆ ಜ್ವಾಲೆಯಾಗಿ ಭುಗಿಲೆದ್ದಿದೆ. ಮಂಡ್ಯದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹುಡುಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದು, ಇದಕ್ಕೆ ಸಿಟ್ಟಿಗೆದ್ದ ಬುರ್ಖಾಧಾರಿ ವಿದ್ಯಾರ್ಥಿನಿಯೊಬ್ಬಳು ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದಾರೆ.
Published: 09th February 2022 07:40 AM | Last Updated: 09th February 2022 01:15 PM | A+A A-

ವಿದ್ಯಾರ್ಥಿನಿ
ಮಂಡ್ಯ: ಹಿಜಾಬ್-ಕೇಸರಿ ಶಾಲು ಕಿಚ್ಚು ಉಡುಪಿಯಿಂದ ಆರಂಭವಾಗಿ ಇದೀಗ ರಾಜ್ಯದಲ್ಲೆಡೆ ಜ್ವಾಲೆಯಾಗಿ ಭುಗಿಲೆದ್ದಿದೆ. ಮಂಡ್ಯದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹುಡುಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದು, ಇದಕ್ಕೆ ಸಿಟ್ಟಿಗೆದ್ದ ಬುರ್ಖಾಧಾರಿ ವಿದ್ಯಾರ್ಥಿನಿಯೊಬ್ಬಳು ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದು, ಸ್ಥಳದಲ್ಲಿ ಕೆಲ ಕಾಲ ಉದ್ನಿಗ್ನ ವಾತಾವರಣ ಸೃಷ್ಟಿಯಾದ ಘಟನೆ ಮಂಗಳವಾರ ನಡೆಯಿತು.
ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕೇಸರಿ ಶಾಲು ಹಾಕಿಕೊಂಡಿದ್ದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಬುರ್ಖಾ ಧರಿಸಿದ್ದ ವಿದ್ಯಾರ್ಥಿನಿ ಪಾರ್ಕಿಂಗ್ ಪ್ರದೇಶದಿಂದ ತನ್ನ ತರಗತಿ ಕೊಠಡಿಗೆ ಹೋಗುತ್ತಿದ್ದಳು. ಈ ಮಧ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಎದುರಿಗೆ ಬಂದಿದ್ದು, ಯುವತಿಯನ್ನು ಕಂಡ ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಕೂಗಿದ್ದಾರೆ.
ಇದರಿಂದ ಕೋಪಗೊಂಡ ಬುರ್ಖಾಧಾರಿ ವಿದ್ಯಾರ್ಥಿನಿ ಅಲ್ಲಾ ಹು ಅಕ್ಬರ್ ಎಂದು ಕೂಗಿ, ತರಗತಿಯ ಒಳಗೆ ಹೋಗಿದ್ದಾಳೆ. ಕೂಡಲೇ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ಬಳಿಕ ಬುರ್ಖಾ ತೊಟ್ಟು ಬಂದ ವಿದ್ಯಾರ್ಥಿನಿಗೆ ಪ್ರವೇಶ ನೀಡಿದ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಕೇಸರಿ ಶಾಲು ಹಾಕಿಕೊಂಡು ಬಂದ ನಮಗೆ ಒಳಗೆ ಹೋಗಲು ಅವಕಾಶ ಕೊಡುತ್ತಿಲ್ಲ. ಬುರ್ಖಾ ಹಾಕಿಕೊಂಡು ಬಂದವರಿಗೆ ಒಳಹೋಗುವುದಕ್ಕೆ ಅವಕಾಶ ಕೊಟ್ಟಿದ್ದಾರೆ. ವಿದ್ಯಾರ್ಥಿನಿಯನ್ನು ಹೊರಗೆ ಕಳುಹಿಸಿ ಎಂದು ನಾವು ಹೇಳುತ್ತಿಲ್ಲ, ಅವರು ಧರಿಸಿರುವ ಹಿಜಾಬ್ ಮತ್ತು ಬುರ್ಖಾ ತೆಗೆಸಿ ಎನ್ನುವುದಷ್ಟೇ ನಮ್ಮ ಆಗ್ರಹ. ಆಗ ನಾವೂ ಕೂಡ ಕೇಸರಿ ಶಾಲನ್ನು ತೆಗೆದು ತರಗತಿಗೆ ಬರುತ್ತೇವೆಂದು ಹೇಳಿದರು.