ಹಿಜಾಬ್ v/s ಕೇಸರಿ ಸಂಘರ್ಷ: ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಮಹತ್ವದ ಸಚಿವ ಸಂಪುಟ ಸಭೆ, ಹೈಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ
ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು(Hijab row) ಧರಿಸುವ ಕುರಿತ ವಿವಾದ ವಿಕೋಪಕ್ಕೆ ತಿರುಗಿದೆ. ಹಲವು ಜಿಲ್ಲೆಗಳಲ್ಲಿ ಕಲ್ಲು ತೂರಾಟ, ಹಲ್ಲೆ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಇಂದು ಬುಧವಾರದಿಂದ 3 ದಿನ ರಾಜ್ಯಾದ್ಯಂತ 9ನೇ ತರಗತಿಯಿಂದ ಕಾಲೇಜುವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
Published: 09th February 2022 08:22 AM | Last Updated: 09th February 2022 01:18 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು(Hijab row) ಧರಿಸುವ ಕುರಿತ ವಿವಾದ ವಿಕೋಪಕ್ಕೆ ತಿರುಗಿದೆ. ಹಲವು ಜಿಲ್ಲೆಗಳಲ್ಲಿ ಕಲ್ಲು ತೂರಾಟ, ಹಲ್ಲೆ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಇಂದು ಬುಧವಾರದಿಂದ 3 ದಿನ ರಾಜ್ಯಾದ್ಯಂತ 9ನೇ ತರಗತಿಯಿಂದ ಕಾಲೇಜುವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ಈ ಮಧ್ಯೆ ಹಿಜಾಬ್-ಕೇಸರಿ ವಿವಾದ ಹೈಕೋರ್ಟ್ ಅಂಗಳಕ್ಕೆ ತಲುಪಿದ್ದು ಇಂದು ಅಪರಾಹ್ನ 2.30ಕ್ಕೆ ಹೈಕೋರ್ಟ್ ನ ಏಕಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆದು ಹೈಕೋರ್ಟ್(Karnataka high court) ಏನು ತೀರ್ಪು ನೀಡಲಿದೆ ಎಂಬುದು ಇಲ್ಲಿ ಮುಖ್ಯವಾಗಿದೆ.
ಇಂದು ಸಿಎಂ ಮಹತ್ವದ ಸಭೆ: ಹಿಜಾಬ್ ವಿವಾದ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೆಳಗ್ಗೆ 11 ಗಂಟೆಗೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ(Cabinet meeting) ನಡೆಸಲಿದ್ದಾರೆ. ಅದರಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ ಸಿ ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ ಮತ್ತು ಇತರ ಜಿಲ್ಲಾ ಉಸ್ತುವಾರಿ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ: ಶಾಂತಿ ಕಾಪಾಡುವಂತೆ ಮನವಿ ಮಾಡಿ ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್
ಹಿಜಾಬ್-ಕೇಸರಿ ವಿವಾದ, ಮುಂದಿನ ಕ್ರಮಗಳು, ವಿವಿಧ ಜಿಲ್ಲೆಗಳಲ್ಲಿನ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಸಿಎಂ ಬೊಮ್ಮಾಯಿಯವರು ಗಂಭೀರವಾದ ಚರ್ಚೆ ನಡೆಸಲಿದ್ದು, ಜಿಲ್ಲೆಗಳಿಂದ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ: ನಿನ್ನೆ ರಾತ್ರಿ ಇಲಾಖೆಯ ಅಧಿಕಾರಿಗಳ ಜೊತೆ ಮಹತ್ವದ ತುರ್ತು ಸಭೆ ನಡೆಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಹಿಜಾಬ್-ಕೇಸರಿ ಶಾಲು ವಿವಾದ ವಿಚಾರದಲ್ಲಿ ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯದ 19 ಜಿಲ್ಲೆಗಳ 55 ಕಾಲೇಜುಗಳಲ್ಲಿ ಪ್ರತಿಭಟನೆ ತೀವ್ರವಾಗಿದೆ.