ಬಾಡಿ ಕ್ಯಾಮೆರಾ ಧರಿಸಲು ಪೊಲೀಸರಿಗೆ ಸೂಚನೆ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು
ಪೊಲೀಸ್ ಅಧಿಕಾರಿಗಳು ಕರ್ತವ್ಯದ ವೇಳೆ ಬಾಡಿ ಕ್ಯಾಮೆರಾಗಳನ್ನು ಧರಿಸುವಂತೆ ಸೂಕ್ತ ನಿರ್ದೇಶನಗಳನ್ನು ನೀಡುವ ಮೂಲಕ ನಗರದಲ್ಲಿ ಸ್ಮಾರ್ಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
Published: 09th February 2022 09:20 AM | Last Updated: 09th February 2022 01:20 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಪೊಲೀಸ್ ಅಧಿಕಾರಿಗಳು ಕರ್ತವ್ಯದ ವೇಳೆ ಬಾಡಿ ಕ್ಯಾಮೆರಾಗಳನ್ನು ಧರಿಸುವಂತೆ ಸೂಕ್ತ ನಿರ್ದೇಶನಗಳನ್ನು ನೀಡುವ ಮೂಲಕ ನಗರದಲ್ಲಿ ಸ್ಮಾರ್ಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಈ ಸಂಬಂಧ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಬಾಡಿ ವೋರ್ನ್ ಕ್ಯಾಮೆರಾಗಳ ಖರೀದಿಗೆ ಹೊರಡಿಸಲಾಗಿರುವ ಕಾರ್ಯಾದೇಶವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ‘ಒಟ್ಟು 2,680 ಕ್ಯಾಮೆರಾಗಳ ಖರೀದಿಗೆ 3 ಪ್ರತ್ಯೇಕ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ 1,092 ಕ್ಯಾಮರಾಗಳನ್ನು ಕಂಪನಿಗಳು ಪೂರೈಸಿವೆ. ಉಳಿದ ಕ್ಯಾಮೆರಾಗಳನ್ನು ಖರೀದಿಸಿದ ನಂತರ, ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ ಅವುಗಳ ಬಳಕೆ ಮಾಡಲಾಗುವುದು’ ಎಂದು ಹೇಳಿದರು.
ಇದನ್ನೂ ಓದಿ: ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದರೆ ಜೈಲಿಗಟ್ಟುತ್ತೇವೆ: ಬಿಬಿಎಂಪಿ ಅಧಿಕಾರಿಗಳಿಗೆ 'ಹೈ' ಎಚ್ಚರಿಕೆ
ಅರ್ಜಿದಾರರ ಪರ ವಕೀಲ ಜಿ. ಆರ್. ಮೋಹನ್, ಈ ಹಿಂದೆಯೂ ಸರ್ಕಾರ ರೂ.75 ಲಕ್ಷ ವೆಚ್ಚ ಮಾಡಿ 50 ಬಾಡಿ ವೋರ್ನ್ ಕ್ಯಾಮೆರಾಗಳನ್ನು ಖರೀದಿಸಿತ್ತು. ಆದರೆ, ಅವುಗಳನ್ನು ಬಳಕೆ ಮಾಡಿರಲಿಲ್ಲ’ ಎಂದು ಆಕ್ಷೇಪಿಸಿದರು. ‘ಈಗ ಖರೀದಿಸುವ ಕ್ಯಾಮೆರಾ ಗಳನ್ನೂ ಹಿಂದಿನಂತೆಯೇ ಬಳಕೆ ಮಾಡದಂತೆ ಇಡಬಾರದು. ಈ ಕುರಿತು ಸರ್ಕಾರಕ್ಕೆ ನಿರ್ದೇಶಿಬೇಕು‘ ಎಂದು ಮನವಿ ಮಾಡಿಕೊಂಡರು.
ವಾದಗಳ ಆಲಿಸಿದ ನ್ಯಾಯಪೀಠವು, ಕಾನೂನು ಸುವ್ಯವಸ್ಥೆ ಹಾಗೂ ಮೇಲ್ವಿಚಾರಣೆ ದೃಷ್ಟಿಯಿಂದ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಖರೀದಿಸಲಾಗುವ ಒಟ್ಟು 2680 ಬಾಡಿ ವೋರ್ನ್ ಕ್ಯಾಮೆರಾಗಳನ್ನು ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತು.