ಹಿಜಾಬ್ ವಿವಾದ ಮಧ್ಯೆ ನಾಳೆ ಪಿಯುಸಿ, ಪದವಿ ತರಗತಿಗಳು ಆರಂಭ: ಹಿಜಾಬ್ ಧರಿಸಿ ಬಂದ ಶಿಕ್ಷಕಿಗೆ ನೊಟೀಸ್
ಹಿಜಾಬ್ ವಿವಾದದ ನಡುವೆಯೇ ನಿನ್ನೆ 9 ಮತ್ತು 10ನೇ ತರಗತಿ ಶಾಲೆ ಆರಂಭವಾಗಿದ್ದರೂ ಬಹುತೇಕ ಕಡೆ ಗೊಂದಲದ ಬಿಗುವಿನ ವಾತಾವರಣ ಕಂಡುಬಂತು. ಶಿವಮೊಗ್ಗದಲ್ಲಿ ತರಗತಿಯೊಳಗೆ ಹಿಜಾಬ್ ಧರಿಸಲು ಬಿಡದ ಹಿನ್ನೆಲೆಯಲ್ಲಿ 10ನೇ ತರಗತಿಯ 13 ವಿದ್ಯಾರ್ಥಿನಿಯರು ಪೂರ್ವ ತಯಾರಿ ಪರೀಕ್ಷೆ ಬರೆಯದೆ ವಾಪಸ್ಸಾದ ಘಟನೆ ನಡೆದಿದೆ.
Published: 15th February 2022 08:35 AM | Last Updated: 15th February 2022 01:18 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಹಿಜಾಬ್ ವಿವಾದದ ನಡುವೆಯೇ ನಿನ್ನೆ 9 ಮತ್ತು 10ನೇ ತರಗತಿ ಶಾಲೆ ಆರಂಭವಾಗಿದ್ದರೂ ಬಹುತೇಕ ಕಡೆ ಗೊಂದಲದ ಬಿಗುವಿನ ವಾತಾವರಣ ಕಂಡುಬಂತು. ಶಿವಮೊಗ್ಗದ ಕರ್ನಾಟಕ ಪಬ್ಲಿಕ್ ಶಾಲೆಯ ತರಗತಿಯೊಳಗೆ ಹಿಜಾಬ್ ಧರಿಸಲು ಬಿಡದ ಹಿನ್ನೆಲೆಯಲ್ಲಿ 10ನೇ ತರಗತಿಯ 13 ವಿದ್ಯಾರ್ಥಿನಿಯರು ಪೂರ್ವ ತಯಾರಿ ಪರೀಕ್ಷೆ ಬರೆಯದೆ ವಾಪಸ್ಸಾದ ಘಟನೆ ನಡೆದಿದೆ. ಇನ್ನು ಕೊಡಗಿನಲ್ಲಿ ಕೂಡ ಹಿಜಾಬ್ ಧರಿಸಲು ತರಗತಿಯೊಳಗೆ ಬಿಡದಿದ್ದರಿಂದ ಸುಮಾರು 32 ವಿದ್ಯಾರ್ಥಿನಿಯರು ಮನೆಗೆ ವಾಪಸ್ಸಾಗಿದ್ದಾರೆ.
ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಕಾರ್ಫ್ ತೆಗೆದು ಪರೀಕ್ಷೆ ಬರೆಯುವಂತೆ ಮನವೊಲಿಸಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ.ಕರ್ನಾಟಕ ಹೈಕೋರ್ಟ್ನಿಂದ ನ್ಯಾಯ ಸಿಗುವ ಭರವಸೆಯನ್ನು ವಿದ್ಯಾರ್ಥಿಗಳ ಪೋಷಕರು ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ನಡೆದ ಘಟನೆಯೊಂದರಲ್ಲಿ ಶಾಲೆಯ ಆಡಳಿತ ಮಂಡಳಿ ಶಿಕ್ಷಕಿಯೊಬ್ಬರಿಗೆ ಶಾಲೆಗೆ ಪ್ರವೇಶಿಸುವ ಮುನ್ನ ಹಿಜಾಬ್ ತೆಗೆಯುವಂತೆ ಹೇಳಿದ್ದು ತೀವ್ರ ಟೀಕೆಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಮೈಸೂರು,ಮಂಡ್ಯ, ಬೆಳಗಾವಿ, ಬೆಂಗಳೂರಿನ ವಿದ್ಯಾಸಾಗದ ಶಾಲೆ ಹೀಗೆ ಅನೇಕ ಕಡೆ ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ಶಾಲೆಯೊಳಗೆ ಅದರಲ್ಲೂ ತರಗತಿಯೊಳಗೆ ಪ್ರವೇಶ ನೀಡಿದ್ದಾರೆ. ಕೆಲವು ಶಿಕ್ಷಕಿಯರೂ ಕೂಡ ತರಗತಿಯೊಳಗೆ ಹಿಜಾಬ್ ಧರಿಸಿ ಪಾಠ ಮಾಡಿದ್ದು ಕಂಡುಬಂತು. ಹಿಜಾಬ್ ಧರಿಸಿ ತರಗತಿಯೊಳಗೆ ಪ್ರವೇಶಿಸಿದ್ದ ಶಿಕ್ಷಕಿಯೊಬ್ಬರಿಗೆ ನೊಟೀಸ್ ನೀಡಲಾಗಿದೆ.ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಭಕ್ತರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿಗೆ ನೊಟೀಸ್ ನೀಡಲಾಗಿದೆ.
ಇದನ್ನೂ ಓದಿ: ರಾಜ್ಯಾದ್ಯಂತ ಬುಧವಾರದಿಂದ ಪಿಯು, ಡಿಗ್ರಿ ಕಾಲೇಜ್ ಆರಂಭ: ಬಿ.ಸಿ.ನಾಗೇಶ್
ಬೆಳಗಾವಿಯಲ್ಲಿ, ಅಂಜುಮನ್ ಶಾಲೆ ಮತ್ತು ಸರ್ದಾರ್ ಹೈಸ್ಕೂಲ್ಗೆ ಹಲವಾರು ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಆಗಮಿಸಿದ್ದು, ಪೋಷಕರು ಮತ್ತು ಶಾಲೆಗಳ ಸಿಬ್ಬಂದಿ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ನಂತರ ವಿದ್ಯಾರ್ಥಿಗಳು ಹಿಜಾಬ್ ತೆಗೆದು ನ್ಯಾಯಾಲಯದ ಮಧ್ಯಂತರ ಆದೇಶವನ್ನು ಪಾಲಿಸುವಂತೆ ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಮನವೊಲಿಸಿದರು.
ಇನ್ನು ನಿನ್ನೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ ವಿಸ್ತೃತ ತ್ರಿಸದಸ್ಯ ಪೀಠ ಇಂದು ಮಧ್ಯಾಹ್ನಕ್ಕೆ ವಿಚಾರಣೆಯನ್ನು ಮುಂದೂಡಿದೆ. ಇಂದು ಹೈಕೋರ್ಟ್ ತೀರ್ಪು ನೀಡುತ್ತದೆಯೇ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ.
ಇಂದು ತರಗತಿಗಳಲ್ಲಿ ಏನು ನಡೆಯಲಿದೆ: ನಿನ್ನೆ ಹಲವೆಡೆ ಹಿಜಾಬ್ ಧರಿಸಿ ತರಗತಿಯೊಳಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರು, ಕೆಲವು ಕಡೆ ಧರಿಸಲು ಅವಕಾಶ ನೀಡದ್ದರಿಂದ ವಾಪಾಸ್ ಹೋಗಿದ್ದು, ಇಂದು ತರಗತಿಯೊಳಗೆ ಏನು ನಡೆಯಲಿದೆ ಎಂಬುದನ್ನು ನೋಡಬೇಕಿದೆ. ಇಂದು ರಾಜ್ಯಾದ್ಯಂತ ಸುಗಮವಾಗಿ ಶಾಲೆಗಳು ನಡೆಯಲಿವೆಯೇ ಅಥವಾ ಗೊಂದಲ, ವಿವಾದಗಳಲ್ಲಿ ಸಾಗಲಿದೆಯೇ ಎಂದು ನೋಡಬೇಕಿದೆ.
ಇದನ್ನೂ ಓದಿ: ಹಿಜಾಬ್ ವಿವಾದ: ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಕರ್ನಾಟಕ ಹೈಕೋರ್ಟ್!
ನಾಳೆ ಪಿಯು, ಡಿಗ್ರಿ ಕಾಲೇಜು ಆರಂಭ: ಭದ್ರತೆ ಕಲ್ಪಿಸಲು ಪೊಲೀಸರು ಇರುವುದರಿಂದ ಮತ್ತು ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳಲಿರುವುದರಿಂದ ನಾಳೆ ಪಿಯು ಮತ್ತು ಪದವಿ ಕಾಲೇಜುಗಳನ್ನು ಆರಂಭಿಸಲು ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಇದನ್ನೂ ಓದಿ: ಹೊಸ ಟ್ವಿಸ್ಟ್: ಶಾಲಾ ಸಮವಸ್ತ್ರಕ್ಕೆ ಹೊಂದುವ ಬಣ್ಣದ ಹಿಜಾಬ್ ಧರಿಸಲು ಅವಕಾಶ ನೀಡಿ - ಹೈಕೋರ್ಟ್ ಗೆ ವಿದ್ಯಾರ್ಥಿಗಳ ಮನವಿ
ಅಲ್ಲದೆ ಹೈಕೋರ್ಟ್ ಕೂಡ ಕಾಲೇಜು ಆರಂಭಕ್ಕೆ ಸೂಚನೆ ನೀಡಿದೆ. ಹೈಕೋರ್ಟ್ ಆದೇಶದಂತೆ ಕಟ್ಟುನಿಟ್ಟಿನ ನಿಯಮ ಪಾಲನೆಯೊಂದಿಗೆ ನಾಳೆ ಕಾಲೇಜುಗಳು ಪುನಾರಂಭವಾಗಲಿವೆ. ಇಂದು ಮತ್ತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮೊದಲಾದವರು ಭಾಗವಹಿಸಲಿದ್ದಾರೆ.