ರಾಜ್ಯದಲ್ಲಿ ಮುಂದುವರೆದ ಗೊಂದಲ: ಹಲವೆಡೆ ಹಿಜಾಬ್ ತೆಗೆಯಲು ವಿದ್ಯಾರ್ಥಿಗಳ ನಕಾರ, ಮಾತಿನ ಚಕಮಕಿ
ಸಮವಸ್ತ್ರ ನಿಯಮ ಇರುವ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಉಡುಗೆ-ತೊಡುಗೆ ಧರಿಸುವಂತಿಲ್ಲ ಎಂಬ ಹೈಕೋರ್ಟ್ ಆದೇಶದ ಹೊರತಾಗಿಯೂ ಪಿಯು-ಪದವಿ ಕಾಲೇಜುಗಳು ಪುನಾರಂಭವಾದ ಮೊದಲ ದಿನವೇ ರಾಜ್ಯದ ವಿವಿಧೆಡೆ ಅನೇಕ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದರಿಂದ ಮತ್ತೆ ಗದ್ದಲ ತೀವ್ರಗೊಂಡಿದೆ.
Published: 16th February 2022 01:20 PM | Last Updated: 16th February 2022 01:50 PM | A+A A-

ಹಿಜಾಬ್ ಧರಿಸಿರುವ ಮುಸ್ಲಿಂ ವಿದ್ಯಾರ್ಥಿಗಳು.
ಬೆಂಗಳೂರು: ಸಮವಸ್ತ್ರ ನಿಯಮ ಇರುವ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಉಡುಗೆ-ತೊಡುಗೆ ಧರಿಸುವಂತಿಲ್ಲ ಎಂಬ ಹೈಕೋರ್ಟ್ ಆದೇಶದ ಹೊರತಾಗಿಯೂ ಪಿಯು-ಪದವಿ ಕಾಲೇಜುಗಳು ಪುನಾರಂಭವಾದ ಮೊದಲ ದಿನವೇ ರಾಜ್ಯದ ವಿವಿಧೆಡೆ ಅನೇಕ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದರಿಂದ ಮತ್ತೆ ಗದ್ದಲ ತೀವ್ರಗೊಂಡಿದೆ.
ಸೂಕ್ಷ್ಮ ಸ್ಥಳಗಳಲ್ಲಿರುವ ಪಿಯು ಹಾಗೂ ಪದವಿ ಕಾಲೇಜುಗಳ ಬಳಿ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಈ ನಡುವೆಯೇ ಕಾಲೇಜಿಗೆ ಬುರ್ಖಾ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ತೆಗೆಯಲು ನಿರಾಕರಿಸಿದ ಘಟನೆಗಳು ಕಂಡು ಬಂದಿತು.
ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ, ಕಾಲೇಜು ಆಡಳಿತ ಮಂಡಳಿ ಕಾಲೇಜಿಗೆ ರಜೆಯನ್ನು ಘೋಷಿಸಿದೆ.
ಇದನ್ನೂ ಓದಿ: ರಾಜ್ಯದಾದ್ಯಂತ ಎಲ್ಲಾ ಪಿಯು, ಡಿಗ್ರಿ ಕಾಲೇಜು ಪುನರಾರಂಭ: ನಗರದಲ್ಲಿ ಹೆಚ್ಚಿದ ಪೊಲೀಸ್ ಭದ್ರತೆ
ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಕಾಲೇಜಿನ ಮುಖ್ಯದ್ವಾರದ ಹೊರಗೆ ನಿಂತಿದ್ದ ಬಾಲಕಿಯರು ಮಾತನಾಡಿ, ಸರ್ಕಾರದ ಯಾವುದೇ ಆದೇಶಕ್ಕಿಂತ ನಮಗೆ ನಮ್ಮ ನಂಬಿಕೆಯೇ ಮುಖ್ಯ ಎಂದು ಹೇಳಿದ್ದಾರೆ.
ಇಂದು ಟೆಸ್ಟ್ ಇತ್ತು. ಆದರೆ, ನಮಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿಲ್ಲ. ನಮಗೆ ಶಿಕ್ಷಕ್ಕಿಂತಲೂ ನಮ್ಮ ನಂಬಿಕೆ ಮುಖ್ಯ. ಆ ನಂಬಿಕೆಯಲ್ಲಿ ಬುರ್ಖಾ ಕೂಡ ಒಂದು ಭಾಗವಾಗಿದೆ. ಅದನ್ನು ನಾವು ತೆಗೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಹಿಜಾಬ್ ತೆಗೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಿಜಯಪುರ, ಬಿಜಾಪುರ, ಕಲಬುರಗಿ ಹಾಗೂ ಯಾದಗಿರಿಯ ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ಕಾಲೇಜು ಪ್ರವೇಶಕ್ಕೆ ನಿರಾಕರಿಸಿದ ಘಟನೆಗಳು ನಡೆದಿವೆ.
ಜನವರಿ 1ರಂದು ಉಡುಪಿಯ ಕಾಲೇಜೊಂದರ ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ನಿರಾಕರಿಸಿದ ಕಾಲೇಜು ಆಡಳಿತ ಮಂಡಳಿಯ ನಿರ್ಧಾರವನ್ನು ವಿರೋಧಿಸಿ ಕರಾವಳಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಕೋರ್ಟ್ನ ಮಧ್ಯಂತರ ಆದೇಶ ಪಾಲಿಸಿ, ಮಕ್ಕಳ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಡಲು ಎಲ್ಲರೂ ಸಹಕರಿಸಬೇಕು: ಸಿಎಂ ಬೊಮ್ಮಾಯಿ
ತರಗತಿಯಲ್ಲಿ ಹಿಜಾಬ್ ಧರಿಸಲು ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡಿದ್ದರು. ಆದರೆ, ಅದಕ್ಕೆ ಅನುಮತಿ ನೀಡಲಾಗಿರಲಿಲ್ಲ. ನಂತರ ಕ್ಯಾಂಪಸ್'ಗೆ ಹಿಜಾಬ್ ಧರಿಸಿ ಬರಲು ಆರಂಭಿಸಿದ್ದರು. ನಂತರ ತರಗತಿ ವೇಳೆ ಹಿಜಾಬ್ ತೆಗೆದು ಕುಳಿತುಕೊಳ್ಳಲು ಆರಂಭಿಸಿದ್ದರು. ಕಾಲೇಜಿನಲ್ಲಿ ಕಳೆದ 35 ವರ್ಷಗಳಿಂದಲೂ ಯಾರೊಬ್ಬರೂ ಹಿಜಾಬ್ ಧರಿಸಿ ಬಂದಿರಲಿಲ್ಲ. ಆಗ್ರಹ ಹಾಗೂ ಮನವಿ ಮಾಡಿದ್ದ ಕೆಲವು ವಿದ್ಯಾರ್ಥಿಗಳ ಹಿಂದೆ ಕೆಲವು ಸಂಘಟನೆಗಳಿವೆ ಎಂದು ಕಾಲೇಜು ಪ್ರಾಂಶುಪಾಲ ರುದ್ರೇಗೌಡ ಅವರು ಹೇಳಿದ್ದಾರೆ.
ಕರಾವಳಿಯ ಕೆಲ ಜಿಲ್ಲೆಗಳಲ್ಲಿ ಹೊತ್ತಿಕೊಂಡ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ರಾಜ್ಯದ ಇತರೆಡೆಗೂ ಹಬ್ಬುವುದು ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರ ಪ್ರೌಢಶಾಲೆ, ಪಿಯುಸಿ, ಪದವಿ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಫೆ.9ರಿಂದ 11ರವರೆಗೆ ರಜೆ ನೀಡಿತ್ತು. ಬಳಿಕ ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಸೋಮವಾರದಿಂದ 9 ಮತ್ತು 10ನೇ ತರಗತಿಗಳನ್ನು ಆರಂಭಿಸಿತ್ತು. ಪಿಯು ಕಾಲೇಜುಗಳಿಗೆ ಫೆ.15ರವರೆಗೆ ರಜೆ ಘೋಷಿಸಿತ್ತು. ಇದೀಗ ಆ ರಜೆ ಮುಕ್ತಾಯಗೊಂಡಿದ್ದು, ಎಂದಿನಂತೆ ಬುಧವಾರದಿಂದ ಕಾಲೇಜುಗಳು ಆರಂಭಗೊಂಡಿವೆ. ಇದರ ಜೊತೆಗೆ ವಿವಿಗಳು, ಪದವಿ ಹಾಗೂ ಮೇಲ್ಪಟ್ಟ ಎಲ್ಲಾ ಕಾಲೇಜುಗಳೂ ಆರಂಭಗೊಂಡಿವೆ.