ಕುಸಿದುಬಿದ್ದ ನರ್ಸ್ ಬ್ರೈನ್ ಡೆಡ್: ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು!
ಮಗಳ ಹಠಾತ್ ನಿಧನದ ದುಃಖದ ನಡುವೆಯೇ ಕುಟುಂಬವೊಂದು ಬೆಂಗಳೂರಿನ ಪಿಎಂಎಸ್ಎಸ್ವೈ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಆಕೆಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆಯನ್ನು ಮೆರೆದಿದ್ದಾರೆ.
Published: 16th February 2022 12:44 PM | Last Updated: 16th February 2022 01:49 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮಗಳ ಹಠಾತ್ ನಿಧನದ ದುಃಖದ ನಡುವೆಯೇ ಕುಟುಂಬವೊಂದು ಬೆಂಗಳೂರಿನ ಪಿಎಂಎಸ್ಎಸ್ವೈ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಆಕೆಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆಯನ್ನು ಮೆರೆದಿದ್ದಾರೆ.
ಗಾನವಿಗೌಡ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 8 ರಂದು ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಪ್ರಜ್ಞೆ ತಪ್ಪಿದ್ದರು.
ಕೂಡಲೇ ಆಕೆಯನ್ನು ಬೆಂಗಳೂರಿನ ಪಿಎಂಎಸ್ಎಸ್ವೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನರ್ಸ್ ನಾಲ್ಕು ದಿನಗಳ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದರು. ಆರೋಗ್ಯದಲ್ಲಿ ಯಾವುದೇ ಸುಧಾರಣೆಗಳೂ ಕಂಡು ಬಂದಿರಲಿಲ್ಲ. ಫೆಬ್ರವರಿ 12 ರಂದು ವೈದ್ಯರು ಆಕೆಯ ಬ್ರೈನ್ ಡೆಡ್ ಆಗಿದೆ ಎಂದು ಘೋಷಿಸಿದ್ದರು.
ಇದನ್ನೂ ಓದಿ: ಮದುವೆ ಮನೆಯಲ್ಲೇ ಕುಸಿದು ಬಿದ್ದ ವಧು ಬ್ರೈನ್ ಡೆಡ್: ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ; ನೊಂದ ಆರೋಗ್ಯ ಸಚಿವರಿಂದ ಟ್ವೀಟ್!
ಈ ಹೃದಯ ವಿದ್ರಾವಕ ಪರಿಸ್ಥಿತಿಯಲ್ಲೂ ಕುಟುಂಬ ಸದಸ್ಯರು ಆಸ್ಪತ್ರೆಗೆ ಆಕೆಯ ಪ್ರಮುಖ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಪೋಷಕರ ಇಚ್ಛೆಯಂತೆ, ದೇಹವನ್ನು ಗ್ಯಾಸ್ಟ್ರೋಎಂಟರಾಲಜಿ ಮತ್ತು ಅಂಗಾಂಗ ಕಸಿ (IGOT) ಆಸ್ಪತ್ರೆಗೆ ವರ್ಗಾಯಿಸಲಾಯಿತು. ನಂತರ ಅಂಗಾಂಗ ಮರುಪಡೆಯುವಿಕೆ ಮಾಡಲಾಯಿತು.
ಗಾನವಿ ಗೌಡ ಅವರ ಅಂಗಾಗಗಳನ್ನು 6 ಮಂದಿ ರೋಗಿಗಳಿಗೆ ಕಸಿ ಮಾಡಲಾಗಿದೆ. ಗಾನವಿ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಕಟ್ಟಿಮನೆ-ಹೊಸಕೊಪ್ಪದವರಾಗಿದ್ದು, ಕೃಷ್ಣಮೂರ್ತಿ ಮತ್ತು ಲೀಲಾವತಿ ದಂಪತಿಯ ದ್ವಿತೀಯ ಪುತ್ರಿಯಾಗಿದ್ದಾರೆ.