ರಾಜ್ಯದಾದ್ಯಂತ ಎಲ್ಲಾ ಪಿಯು, ಡಿಗ್ರಿ ಕಾಲೇಜು ಪುನರಾರಂಭ: ನಗರದಲ್ಲಿ ಪೊಲೀಸ್ ಭದ್ರತೆ ಹೆಚ್ಚಳ
ಹಿಜಾಬ್ ವಿವಾದದ ನಡುವಲ್ಲೇ ರಾಜ್ಯದಾದ್ಯಂತ ಬುಧವಾರದಿಂದ ಪಿಯು ಹಾಗೂ ಪದವಿ ಕಾಲೇಜುಗಳ ಭೌತಿಕ ತರಗತಿಗಳು ಆರಂಭಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಸಿಲಿಕಾನ್ ಸಿಟಿಯ ಎಲ್ಲಾ ಕಾಲೇಜುಗಳಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ.
Published: 16th February 2022 09:39 AM | Last Updated: 16th February 2022 01:37 PM | A+A A-

ಶಾಲಾ ವಿದ್ಯಾರ್ಥಿನಿಯರು.
ಬೆಂಗಳೂರು: ಹಿಜಾಬ್ ವಿವಾದದ ನಡುವಲ್ಲೇ ರಾಜ್ಯದಾದ್ಯಂತ ಬುಧವಾರದಿಂದ ಪಿಯು ಹಾಗೂ ಪದವಿ ಕಾಲೇಜುಗಳ ಭೌತಿಕ ತರಗತಿಗಳು ಆರಂಭಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಸಿಲಿಕಾನ್ ಸಿಟಿಯ ಎಲ್ಲಾ ಕಾಲೇಜುಗಳಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ.
ವಿವಿಗಳು, ಕಾಲೇಜುಗಳಿಗೆ ಫೆ.16ರವರೆಗೆ ವಿಸ್ತರಿಸಿದ್ದ ರಜೆಯನ್ನು ರದ್ದುಪಡಿಸಿದ್ದ ಉನ್ನತ ಶಿಕ್ಷಣ ಇಲಾಖೆಯು ಫೆ.16ರಿಂದಲೇ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ, ಅನುದಾನಿಕ ಮತ್ತು ಅನುದಾನ ರಹಿತ ಪದವಿ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಭೌತಿಕ ತರಗತಿ ಆರಂಭಿಸುವಂತೆ ಮಂಗಳವಾರ ಸುತ್ತೋಲೆ ಹೊರಡಿಸಿತ್ತು. ಇದರಂತೆ ಇಂದಿನಿಂದ ಪಿಯು ಹಾಗೂ ಪದವಿ ಕಾಲೇಜುಗಳು ಆರಂಭಗೊಂಡಿವೆ.
ಕರಾವಳಿಯ ಕೆಲ ಜಿಲ್ಲೆಗಳಲ್ಲಿ ಹೊತ್ತಿಕೊಂಡ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ರಾಜ್ಯದ ಇತರೆಡೆಗೂ ಹಬ್ಬುವುದು ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರ ಪ್ರೌಢಶಾಲೆ, ಪಿಯುಸಿ, ಪದವಿ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಫೆ.9ರಿಂದ 11ರವರೆಗೆ ರಜೆ ನೀಡಿತ್ತು. ಬಳಿಕ ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಸೋಮವಾರದಿಂದ 9 ಮತ್ತು 10ನೇ ತರಗತಿಗಳನ್ನು ಆರಂಭಿಸಿತ್ತು. ಪಿಯು ಕಾಲೇಜುಗಳಿಗೆ ಫೆ.15ರವರೆಗೆ ರಜೆ ಘೋಷಿಸಿತ್ತು. ಇದೀಗ ಆ ರಜೆ ಮುಕ್ತಾಯಗೊಂಡಿದ್ದು, ಎಂದಿನಂತೆ ಬುಧವಾರದಿಂದ ಕಾಲೇಜುಗಳು ಆರಂಭಗೊಂಡಿವೆ. ಇದರ ಜೊತೆಗೆ ವಿವಿಗಳು, ಪದವಿ ಹಾಗೂ ಮೇಲ್ಪಟ್ಟ ಎಲ್ಲಾ ಕಾಲೇಜುಗಳೂ ಆರಂಭಗೊಂಡಿವೆ.
ಇದನ್ನೂ ಓದಿ: ಹಿಜಾಬ್ ವಿವಾದ: ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್ ತ್ರಿಸದಸ್ಯ ಪೀಠ!
ನಿನ್ನೆಯಷ್ಟೇ ಮಧ್ಯಂತರ ಆದೇಶ ಹೊರಡಿಸಿದ್ದ ಹೈಕೋರ್ಟ್'ನ ತ್ರಿಸದಸ್ಯ ಪೀಠ, ವಿಚಾರಣೆ ಮುಗಿಯುವವರೆಗೂ ಧಾರ್ಮಿಕ ಸಂಕೇತ ಬಳಸದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು, ಆದೇಶ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದ ಆಯಾ ವಲಯಗಳಲ್ಲಿರುವ ಕಾಲೇಜುಗಳ ಮುಂದೆ ಶಾಂತಿ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಡಿಪಿಪಿಗಳಿಗೆ ನಿರ್ದೇಶನ ನೀಡಿತ್ತು.
ಕಮಿಷನರ್ ನಿರ್ದೇಶನ ಹಿನ್ನೆಲೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿರುವ ಕಾಲೇಜು ಆಡಳಿತ ಮಂಡಳಿಯವರ ಜತೆ ಸ್ಥಳೀಯ ಪೊಲೀಸರು ಸಭೆ ನಡೆಸಿದ್ದಾರೆ.
ಧಾರ್ಮಿಕ ಸಂಕೇತವಿರುವ ಉಡುಪು ಧರಿಸಿ ವಿದ್ಯಾರ್ಥಿಗಳು ಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಲೇಜು ಆವರಣದಲ್ಲಿ ಪ್ರತಿಭಟನೆ, ಗುಂಪುಗೂಡುವುದು ಸೇರಿದಂತೆ ಸಾಮೂಹಿಕವಾಗಿ ವಿದ್ಯಾರ್ಥಿಗಳು ಅನಗತ್ಯವಾಗಿ ಒಂದೆಡೆ ಸೇರುವುದು ಸೇರಿದಂತೆ ಇನ್ನಿತರ ಚಟುವಟಿಕೆಗೆ ನಿರ್ಬಂಧ ವಿಧಿಸಬೇಕು.
ಶೈಕ್ಷಣಿಕ ಸಂಸ್ಥೆಗಳ ಮುಂದೆ 144 ಸೆಕ್ಷನ್ ಜಾರಿಯಲ್ಲಿದ್ದು, ಕಾಲೇಜು ಸುತ್ತಲಿನ 200 ಮೀಟರ್ ವ್ಯಾಪ್ತಿಯವರೆಗೂ ನಾಲ್ಕು ಜನಕ್ಕಿಂತ ಹೆಚ್ಚಿರದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಗಿದೆ.
ತರಗತಿ ಅವಧಿಯಲ್ಲಿ ಕಾಲೇಜುಗಳ ಮುಂದೆ ಅಗತ್ಯಗನುಣವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬರುವ ಕಾಲೇಜುಗಳ ಮುಂದೆ ಪೊಲೀಸರು ಬ್ಯಾರಿಕೇಡ್ ಹಾಕಲಾಗಿದೆ. ವದಂತಿಗಳಿಗೆ ಕಿವಿಗೊಡದಂತೆ ವಿದ್ಯಾರ್ಥಿಗಳಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ವಿಧಾನಸಭೆ ಕಲಾಪ: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ಜಾರಿಗೆ ಬದ್ಧ ಎಂದ ಸರ್ಕಾರ
ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ್ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಪರಿಶೀಲನಾ ಸಭೆಯನ್ನೂ ನಡೆಸಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾಗೇಶ್ ಅವರು, ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪಿಯು ಹಾಗೂ ಪದವಿ ಕಾಲೇಜುಗಳನ್ನು ಹೈಕೋರ್ಟ್ ನಿರ್ದೇಶನದಂತೆ ಪುನರಾರಂಭಿಸಲು ನಿರ್ಧರಿಸಲಾಗಿದೆ. ಸಮವಸ್ತ್ರ ಇರುವ ಕಡೆ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾಲೇಜುಗಳ ಮರಳಿ ಆರಂಭ ಬಯಿಸಿದ್ದಾರೆ. ಕಾಲೇಜು ಹಾಗೂ ಶಾಲೆಗಳ ಪ್ರಾಂಶುಪಾಲರೊಂದಿಗೆ ಪೊಲೀಸರು ನಿರಂತರ ಸಂಪರ್ಕದಲ್ಲಿರಲಿದ್ದು, ಸಂಪೂರ್ಣ ಬೆಂಬಲ ನೀಡಲಿದ್ದಾರೆಂದು ಹೇಳಿದ್ದಾರೆ.
ಇದೇ ವೇಳ ವಿವಾದದ ಹಿಂದೆ ಕಾಣದ ಕೈಗಳ ಕೈವಾಡ ಕುರಿತ ಪ್ರಶ್ನೆಗೆ ಉತ್ತರಿಸಿ, ಪೊಲೀಸರು ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಹಂತದಲ್ಲಿ ಯಾವುದೇ ಮಾಹಿತಿಗಳನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.