ಕೆಲಸದ ಆಮಿಷ ಒಡ್ಡಿ ಹಣ ಪಡೆದು ವಂಚನೆ: ಮೂವರ ಬಂಧನ
ನಗರದ ಪ್ರತಿಷ್ಠಿತ ಎಂಎನ್ಸಿ ಕಂಪನಿಗಳಲ್ಲಿ ಕೆಲಸ ಕೊಡಿಸುವ ಆಮಿಷ ಒಡ್ಡಿ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಖತರ್ನಾಕ್ ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.
Published: 16th February 2022 01:17 PM | Last Updated: 16th February 2022 01:20 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದ ಪ್ರತಿಷ್ಠಿತ ಎಂಎನ್ಸಿ ಕಂಪನಿಗಳಲ್ಲಿ ಕೆಲಸ ಕೊಡಿಸುವ ಆಮಿಷ ಒಡ್ಡಿ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಖತರ್ನಾಕ್ ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.
ವಂಚನೆ ಗ್ಯಾಂಗ್ ನ ಕಿಂಗ್ ಪಿನ್ ಸೇರಿದಂತೆ ಮೂವರು ವಂಚಕರನ್ನು ನಗರದ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಕಾಳಿ ಪ್ರಸಾದ್ ರಾತ್ ಅಲಿಯಾಸ್ ಕಾಳಿ, ಅಭಿಜಿತ್ ಅರುಣ ನೆಟಕೆ, ಅಭಿಷೇಕ್ ಮೊಹಂತಿ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಪೋಸ್ಟ್ ಮಾಡುತ್ತಿದ್ದರು. ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿನ ಮಾನ್ಯತಾ ಟೆಕ್ ಪಾರ್ಕ್ ಕಂಪನಿಗಳ ಹೆಸರು ಹಾಗೂ ಲೋಗೋ ದುರ್ಬಳಕೆ ಮಾಡಿಕೊಂಡು ಅಮಾಯಕರಿಗೆ ವಂಚಿಸುತ್ತಿದ್ದರು. ಐಬಿಎಂ, ಕಾಗ್ನಿಜೆಂಟ್ ಸೇರಿದಂತೆ ಹಲವು ಕಂಪನಿಗಳಲ್ಲಿ ಕೆಲಸ ಕೊಡಿಸೋದಾಗಿ ಫೇಸ್ಬುಕ್, ಲಿಂಕ್ಡ್ಇ ನ್ ನಲ್ಲಿ ಜಾಹೀರಾತು ನೀಡುತ್ತಿದ್ದರು.
ಇದನ್ನು ಕಂಡು ಸಂಪರ್ಕಿಸಿದವರ ಬಳಿ ಹಣ ಪಡೆದು ನಕಲಿ ಜಾಬ್ ಆಫರ್ ಲೆಟರ್ ನೀಡುತ್ತಿದ್ದರು. ನಂತರ ಮಾನ್ಯತಾ ಟೆಕ್ಪಾರ್ಕ್ ಬಳಿಯ ಕಚೇರಿಗೆ ಹೋಗುವಂತೆ ಹೇಳಿ ವ್ಯಕ್ತಿಯೊಬ್ಬರ ಹೆಸರನ್ನ ಹೇಳಿ ಸಂಪರ್ಕಿಸುವಂತೆ ಕಳುಹಿಸುತ್ತಿದ್ದರು. ಅಲ್ಲಿ ಹೋದಾಗ ತಾವು ವಂಚನೆಗೊಳಗಾಗಿರೋದು ತಿಳಿದು ಬರುತ್ತಿತ್ತು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಬಾಡಿಗೆ ಹಾಗೂ ಲೀಸ್ ಮನೆ ಕೊಡಿಸೋದಾಗಿ ಸಹ ಆರೋಪಿಗಳು ವಂಚಿಸಿದ್ದರು ಎಂಬ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಕರು ವಂಚಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಬಂಧಿತ ಆರೋಪಿಗಳ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತ ಆರೋಪಿಗಳ ವಿರುದ್ಧ ಮಹಾರಾಷ್ಟ್ರದಲ್ಲೂ ವಂಚನೆ ಪ್ರಕರಣಗಳು ದಾಖಲಾಗಿರುವುದು ಪೊಲೀಸರು ತನಿಖೆಯಿಂದ ಬೆಳಕಿಗೆ ಬಂದಿದೆ.